ಸರ್ಕಾರಿ ಶಾಲೆ ಜಾಗದ ನೋಂದಣಿ ಪತ್ರ ಹಸ್ತಾಂತರ

1001277940
ಹೊಳೆನರಸೀಪುರದ ತಾಲೂಕು ಕಚೇರಿ ಆವರಣದಲ್ಲಿ ಇರುವ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಬಿಇಒ ಸೋಮಲಿಂಗೇಗೌಡ ಅವರು ದಾನಿಗಳಾದ ಜಿ.ಕೆ.ಕೆಂಚೇಗೌಡ ಅವರಿಂದ ಶಾಲೆ ಜಾಗಕ್ಕೆ ಸಂಬಂಧಿಸಿದ ನೋಂದಣಿ ಪತ್ರ ಸ್ವೀಕರಿಸಿದರು. ರಮೇಶ್, ಜಿ.ಕೆ., ಪದ್ಮಜಾ, ಮಹೇಶ್ ಇದ್ದರು.
Published on

ಹೊಳೆನರಸೀಪುರ: ತಾಲೂಕಿನ ಗುಂಜೇವು ಗ್ರಾಮದ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಜಿ.ಕೆ.ಕೆಂಚೇಗೌಡರು ಗುಂಜೇವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 8 ಗುಂಟೆ ಜಮೀನನ್ನು ದಾನವಾಗಿ ನೀಡುವ ಮೂಲಕ ಗ್ರಾಮೀಣ ಪ್ರದೇಶದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸೌಲಭ್ಯ ಕಲ್ಪಿಸುವ ಜತೆಗೆ ಮಾನವೀಯತೆ ಮೆರೆದಿದ್ದು, ಅವರ ಸೇವಾ ಕಾರ್ಯ ಶ್ಲಾಘನೀಯ. ಶಿಕ್ಷಣ ಇಲಾಖೆ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಬಿಇಒ ಸೋಮಲಿಂಗೇಗೌಡ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಇರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾನಿಗಳಾದ ಜಿ.ಕೆ.ಕೆಂಚೇಗೌಡರಿಂದ ನೋಂದಣಿ ಪತ್ರ ಸ್ವೀಕರಿಸಿ ಮಾತನಾಡಿ, ಕೆಂಚೇಗೌಡರು ಕಣಕಟ್ಟೆ ಗ್ರಾಮದಲ್ಲಿಯೂ 100/120 ಅಳತೆಯ ನಿವೇಶನವನ್ನು ಶಾಲೆಗೆ ದಾನ ನೀಡಿದ್ದಾರೆ. ಜತೆಗೆ ಗುಂಜೇವು ಗ್ರಾಮದಲ್ಲಿ ಗ್ರಾಮಸ್ಥರ ಉಪಯೋಗಕ್ಕೆ ಪಿತ್ರಾರ್ಜಿತವಾಗಿ ನೀಡಿದ್ದ ದೊಡ್ಡ ಮನೆಯನ್ನು ದಾನ ನೀಡಿದ್ದರಂತೆ. ಈಗ ಆ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸಿ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ನೀಡಿದ್ದು, ವಿದ್ಯೆಗೆ ಹೆಚ್ಚಿನ ಮಹತ್ವ ನೀಡುವ ಇವರ ಗುಣವನ್ನು ಎಲ್ಲರೂ ರೂಢಿಸಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಉಳಿವಿಗಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಗುಂಜೇವು ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಜಿ.ಕೆ., ಸಿಆರ್‌ಪಿ ಪದ್ಮಜಾ, ಶಿಕ್ಷಕ ಆನಂದ್, ಮುಖಂಡರಾದ ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net