ಮಕ್ಕಳ ಹಬ್ಬದಲ್ಲಿ ಅಂಗವಿಕಲ ಚಿಣ್ಣರ ಕಲರವ

round teble programme
ಶಿವಮೊಗ್ಗ ಸ್ಕೌಟ್ ಭವನದಲ್ಲಿ ಕಿಡ್ಸ್ ಫಿಯೆಸ್ಟಾದಲ್ಲಿ ವಿವಿಧ ಶಾಲೆಗಳ ಅಂಗವಿಕಲ ಮಕ್ಕಳು ನೃತ್ಯ ಮಾಡಿ ಗಮನ ಸೆಳದರು.
Published on

ಶಿವಮೊಗ್ಗ: ಬಿ.ಎಚ್.ರಸ್ತೆಯ ಸ್ಕೌಟ್ ಆ್ಯಂಡ್ ಗೈಡ್ಸ್ ಭವನದಲ್ಲಿ ಶನಿವಾರ ವಿಶೇಷ ಮಕ್ಕಳ ಕಲರವ ಮನೆ ಮಾಡಿತ್ತು. ನಗರದ ಹತ್ತಾರು ಶಾಲೆಗಳ ನೂರಾರು ಅಂಗವಿಕಲ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಕಿಡ್ಸ್ ಫಿಯೆಸ್ಟಾ (ಮಕ್ಕಳ ಹಬ್ಬ) ಮಕ್ಕಳ ದಿನಾಚರಣೆಗೆ ಮೆರಗು ನೀಡಿದರು. ನೃತ್ಯ ಒಳಗೊಂಡಂತೆ ನಾನಾ ಸ್ಪರ್ಧೆ ಮತ್ತು ಆಟೋಟಗಳಲ್ಲಿ ಭಾಗಿಯಾಗಿ ಮಕ್ಕಳ ಹಬ್ಬವನ್ನು ಮತ್ತಷ್ಟು ರಂಗೇರುವಂತೆ ಮಾಡಿದರು.

ಮಾಧವ ನೆಲೆ, ಶಾರದಾ ದೇವಿ ಅಂಧರ ವಿಕಾಸ ಶಾಲೆ, ತರಂಗ ಕಿವುಡು ಮಕ್ಕಳ ಶಾಲೆ, ಸರ್ಜಿ ಫೌಂಡೇಶನ್, ತಾಯಿ ಮನೆ ಹಾಗೂ ಹ್ಯಾಪಿ ಹೋಂನ 200 ಮಕ್ಕಳು ಭಾಗವಹಿಸಿ ಕಿಡ್ಸ್ ಫಿಯೆಸ್ಟಾದಲ್ಲಿ ಕುಣಿದು ಕುಪ್ಪಳಿಸಿದರು. ವಿಶೇಷವಾಗಿ ಚಿತ್ರಕಲೆ ಒಳಗೊಂಡಂತೆ ವಿವಿಧ ಸ್ಪರ್ಧೆ, ಆಟೋಟಗಳನ್ನು ನಡೆಸುವ ಮೂಲಕ ಮಕ್ಕಳಲಿದ್ದ ಪ್ರತಿಭೆ ಅನಾವರಣಕ್ಕೆ ವೇದಿಕೆ ಸೃಷ್ಟಿಸಲಾಯಿತು.
ಮಕ್ಕಳು ತಮಗಿದ್ದ ಅಂಗವಿಕಲತೆ ಮರೆತು ಇಡೀ ದಿನ ಸಂತೋಷವಾಗಿ ಕಾಲ ಕಳೆದರು. ಪಾಪ್‌ಕಾರ್ನ್, ಬಾಂಬೆ ಮಿಠಾಯಿ ಸೇರಿದಂತೆ ನಾನಾ ಬಗೆಯ ತಿಂಡಿ ತಿನಿಸುಗಳಿಗೆ ಮಕ್ಕಳು ಮನಸೋತರು. ಮಕ್ಕಳು ಹತ್ತು ಹಲವು ಆಕೃತಿಯ ಟ್ಯಾಟುಗಳನ್ನು ಕೈ, ಮುಖಕ್ಕೆ ಹಾಕಿಸಿಕೊಂಡು ಸಂಭ್ರಮಿಸಿದರು. ಮನರಂಜನೆ ಆಟಗಳಲ್ಲಿ ಭಾಗಿಯಾಗಿದ ಮಕ್ಕಳು ಭದ್ರಾವತಿಯ ನೃತ್ಯ ತಂಡ ನಡೆಸಿಕೊಟ್ಟ ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿ ಸಂತಸ ಪಟ್ಟರು.
ಚಿಕ್ಕಮಗಳೂರು ರೌಂಡ್‌ಟೇಬಲ್ ಛೇರ‌್ಮನ್ ದೇವಾನಂದ್ ಮಾತನಾಡಿದರು. ರೌಂಟ್ ಟೇಬಲ್‌ನ ಅಧ್ಯಕ್ಷ ವಿಶ್ವಾಸ್ ಬಿ.ಕಾಮತ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವ್ಯಾಲ್ಯೂ ಪ್ರಾಡಕ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ರೌಂಟ್ ಟೇಬಲ್‌ನ ಕಾರ್ಯದರ್ಶಿ ಈಶ್ವರ್ ಸರ್ಜಿ, ಪ್ರಮುಖರಾದ ಅನಿಲ್‌ರಾಜ್, ಸುಶೃತ್, ಸಿದ್ಧಾರ್ಥ್, ಕಮಲೇಶ್ ಇದ್ದರು.
ನೇತ್ರದಾನ ಮಾಡುವ ಸಂಬಂಧ ಪ್ರತಿಜ್ಞೆ ಸ್ವೀಕರಿಸಲಾಯಿತು. ಡಾ. ಧನಂಜಯ ಸರ್ಜಿ ಸೇರಿದಂತೆ ರೌಂಡ್ ಟೇಬಲ್‌ನ ಸದಸ್ಯರು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನೇತ್ರದಾನ ಮಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net