

ಕೋಲಾರ: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ಸಿದ್ದರಾಮಯ್ಯ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.
ನಗರದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನೆಗಳಿಂದ ಗುರುವಾರ ಆಯೋಜಿಸಿದ್ದ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿ, ಪಾಕಿಸ್ತಾನ ಅನೇಕ ಬಾರಿ ದೇಶದ ಮೇಲೆ ದಾಳಿ ಮಾಡಿದೆ. ಆದರೆ, ಇತ್ತೀಚೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ನವರೇ ಕರೆದುಕೊಂಡು ಬಂದವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಇಂತಹವರಿಗೆ ಶಿಕ್ಷೆ ನೀಡದೆ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ ಅನ್ನಭಾಗ್ಯ ಎಂದು ಹೇಳುತ್ತಾರೆ. ಆದರೆ ಅದು ನಿಜವಾಗಿಯೂ ಮೋದಿ ಭಾಗ್ಯವಾಗಿದೆ. ಸಿದ್ದರಾಮಯ್ಯ ಅವರದ್ದು ಕನ್ನ ಭಾಗ್ಯವಾಗಿದೆ ಎಂದು ಕಿಡಿಕಾರಿದರು.
ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಈಗ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆ. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ಕಾಂಗ್ರೆಸ್. ಅಂಬೇಡ್ಕರರು ತೀರಿಕೊಂಡಾಗ ಸ್ಮಾರಕ ನಿರ್ಮಿಸಲು ಕಾಂಗ್ರೆಸ್ ಜಾಗ ಕೊಡಲಿಲ್ಲ. ಇಷ್ಟೆಲ್ಲ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ದಲಿತರು ಮತ ನೀಡಬೇಕೇ ಎಂದು ಆಲೋಚಿಸಬೇಕು. ಪ್ರಧಾನಿ ಮೋದಿ ಅಂಬೇಡ್ಕರರ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಅವರಿಗೆ ದಲಿತರು ಮತ ನೀಡಬೇಕು ಎಂದು ಕೋರಿದರು.
ದಲಿತರಿಗೆ ಸಹಾಯ
ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ತಂದೆ ಐಎಎಸ್ ಅಧಿಕಾರಿಯಾಗಿ ದಲಿತರಿಗೆ ಸಹಾಯ ಮಾಡಿದ್ದಾರೆ. ವಿದ್ಯಾವಂತ ಯುವಕ ಮಲ್ಲೇಶ್ ಅವರಿಗೆ ಎಲ್ಲರೂ ಬೆಂಬಲಿಸಬೇಕು. ಹಿಂದಿನ ಸಂಸದ ಮುನಿಸ್ವಾಮಿ ಅವರ ಹೆಸರನ್ನು ಹಿಂದೆ ನಾನೇ ಶಿಫಾರಸು ಮಾಡಿದ್ದೆ. ಆಗಲೂ ಎಲ್ಲರೂ ಅಪಾರ ಬೆಂಬಲ ನೀಡಿದ್ದರು. ಈಗಲೂ ಅದೇ ರೀತಿ ಬೆಂಬಲ ನೀಡಬೇಕು ಎಂದು ಆರ್.ಅಶೋಕ್ ಮನವಿ ಮಾಡಿದರು.