ಕಾಂಗ್ರೆಸ್​ ಹಗರಣ ಸಿಬಿಐಗೆ ಒಪ್ಪಿಸಿ

bjp press meet
ಕೋಲಾರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಎಸ್​.ಮುನಿಸ್ವಾಮಿ ಮಾತನಾಡಿದರು. ವೈ.ಎ.ನಾರಾಯಣಸ್ವಾಮಿ, ಡಾ.ಕೆ.ಎನ್​.ವೇಣುಗೋಪಾಲ್​, ಪ್ರವಿಣ್​ಗೌಡ ಇದ್ದರು.
Published on

ಕೋಲಾರ: ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಸರ್ಕಾರವು ಪರಿತಪಿಸುತ್ತಿದೆ. ಇದರಿಂದಲೇ ನಿಗಮ ಸೇರಿ ವಿವಿಧ ಇಲಾಖೆಗಳಲ್ಲಿನ ಹಣ ಲೂಟಿ ಮಾಡುತ್ತಿದೆ ಎಂದು ಮಾಜಿ ಸಂಸದ ಎಸ್​.ಮುನಿಸ್ವಾಮಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಸೇರಿ ವಿವಿಧ ಇಲಾಖೆಗಳಲ್ಲಿ ಉಳಿಕೆಯಾಗಿರುವ ಹಣದ ಮಾಹಿತಿ ಪಡೆದು ಲೂಟಿ ಮಾಡುತ್ತಿದೆ ಎಂದು ದೂರಿದರು.
ಜು.15ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ. ಸರ್ಕಾರದ ಭ್ರಷ್ಟಾಚಾರದ ನೀತಿ ಖಂಡಿಸಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ, ದುಡ್ಡಿಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿತಪಿಸುತ್ತಿದೆ. ಎಲ್ಲ ಪ್ರಕರಣದಲ್ಲೂ ಸಿದ್ದರಾಮಯ್ಯ ನೇರ ಭಾಗಿಯಾಗಿದ್ದು, ನೈತಿಕ ಹೊಣೆಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ತೀವ್ರ ಬರಗಾಲ ಎದುರಾಗಿದ್ದಾಗ ಹಾಲು ಖರೀದಿ ದರ ಏರಿಕೆ ಮಾಡಲಿಲ್ಲ, ಉತ್ಪಾದನೆ ಜಾಸ್ತಿಯಾದ ಕೂಡಲೇ ಮಾರ್ಕೆಟಿಂಗ್​ ಮಾಡುವುದು ಕಷ್ಟವಾಗಿ ಪ್ರತಿ ಲೀಟರ್​ಗೆ 2 ರೂ. ಕಡಿತಗೊಳಿಸಿದ್ದಾರೆ. ಇದು ಅವರ ಸರ್ವಾಧಿಕಾರದ ಧೋರಣೆಗೆ ಸಾಯಾಗಿದೆ ಎಂದು ದೂರಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ಹಗರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸಬೇಕು, ಈ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಮುಡಾದಲ್ಲಿ ಯಾವುದೇ ಹಗರಣವಾಗಿಲ್ಲ ಎಂದು ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಮೈಸೂರಿಗೆ ವಿಶೇಷ ಹೆಲಿಕಾಪ್ಟರ್​ನಲ್ಲಿ ತೆರಳಿ ಕಡತ ತರುವ ಅವಶ್ಯ ಏನಿತ್ತು ಎಂದು ಪ್ರಶ್ನಿಸಿದರು.
ಮುಡಾದಲ್ಲಿ ಸದಸ್ಯರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ನಿವೇಶನ ನೀಡಿದ್ದು, ಸುಮಾರು 400 ಕೋಟಿ ರೂ.ಗಳ ಮೌಲ್ಯದ್ದಾಗಿದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ನಿಗಮದ ಮತ್ತು ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ನಗರಸಭೆ ಸದಸ್ಯ ಪ್ರವಿಣ್​ ಗೌಡ, ವಿವಿಧ ಟಕಗಳ ಪದಾಧಿಕಾರಿಗಳಾದ ವೇಮಣ್ಣ, ಎಂ.ಪಿ.ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್​ ಸಿಂಗ್​ ಹಾಜರಿದ್ದರು.

ಲೂಟಿರಾಮಯ್ಯ
ಗ್ಯಾರಂಟಿಗಳಿಂದ ಸರ್ಕಾರ ನಡೆಸುವುದು ಕಷ್ಟ ಎಂಬ ಅರಿವು ಸಿದ್ದರಾಮಯ್ಯ ಅವರಿಗೆ ಗೊತ್ತಾದಂತಾಗಿದೆ. ಇದರಿಂದಲೇ ನಿಗಮದಲ್ಲಿ, ಮೂಡಾದಲ್ಲಿ ಹಣ ಲೂಟಿ ಮಾಡಿದ್ದಾರೆ. ಹೆಸರಿಗೆ ಮಾತ್ರ ಅಹಿಂದ ನಾಯಕ, ಆದರೆ ಅವರು ಲೂಟಿ ರಾಮಯ್ಯ ಎಂದು ಮುನಿಸ್ವಾಮಿ ಲೇವಡಿ ಮಾಡಿದರು. ಕೋಚಿಮುಲ್​ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಜೀವನದ ಜತೆ ಚಲ್ಲಾಟವಾಡುತ್ತಿದೆ, ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.

ರಾಜೀನಾಮೆ ನೀಡಲಿ
ವಿಧಾನ ಪರಿಷತ್​ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಎಂದೂ ಕಂಡಿರದ ರೀತಿ ಭ್ರಷ್ಟಾಚಾರ ನಡೆದಿದೆ. ಸದ್ಯ ರಾಜ್ಯ ಕಾಂಗ್ರೆಸ್​ ಸರ್ಕಾರವು ಜನರ ದುಡ್ಡನ್ನು ಲೂಟಿ ಮಾಡುವುದರಲ್ಲಿ ನಿರತವಾಗಿದ್ದು, ಸಿಎಂ ಸಿದ್ದರಾಮಯ್ಯ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net