

ಹನಗೋಡು: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಳ್ಳಲು ಪ್ರತಿಭಾ ಕಾರಂಜಿ ಪ್ರೇರಕ ಎಂದು ಶಾಸಕ ಜಿ. ಡಿ. ಹರೀಶ್ ಗೌಡ ತಿಳಿದರು. ಹನಗೋಡು ಹೋಬಳಿಯ ಹೈರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಟ್ಟೆಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿ ಹೊರ ತರಲು, ಅವರ ಸಮಗ್ರ ವಿಕಸನವಾಗಲು ಶಿಕ್ಷಕರು ಮುತ್ತು ಪಾಲಕರ ಕರ್ತವ್ಯ ನಿರ್ವಹಣೆ ಬಹಳ ದೊಡ್ಡದು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಓದಿದ ಅದೆಷ್ಟೊ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ. ಅವರ ಸಾಧನೆಗೆ ಗುರು ಎಂಬ ವ್ಯಕ್ತಿತ್ವವೇ ಕಾರಣ. ಗುರು (ಶಿಕ್ಷಕರು) ಮನಸ್ಸು ಮಾಡಿದರೆ ಸಾಧಾರಣ ವಿದ್ಯಾರ್ಥಿಯನ್ನೂ ಉತ್ತಮ ನಾಯಕನನ್ನಾಗಿ ರೂಪಿಸಬಹುದು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಅಷ್ಟೇ ವಿನಯದಿಂದ ಪಾಠಗಳನ್ನು ಕೇಳಿ, ಉತ್ತಮ ಅಂಕಗಳನ್ನು ಗಳಿಸಿ ಜೀವನ ಮಟ್ಟವನ್ನು ಉನ್ನತೀಕರಿಸಿಕೊಳ್ಳುವತ್ತ ಗಮನ ನೀಡಬೇಕು ಎಂದರು.
ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ತೋರಿ
ಡಿವೈಎಸ್ಪಿ ಸ್ಥಾನಕ್ಕೆ ಏರಿದ ರಘು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮ ಅಳವಡಿಸಿಕೊಂಡರೆ ವಿದ್ಯೆ, ವಿನಯ, ಸಂಸ್ಕಾರಗಳು ತಾನಾಗಿಯೇ ಒಲಿದು ಬರುತ್ತವೆ ಎಂದರು. ಗ್ರಾಮೀಣ ಪ್ರದೇಶದ ಮಕ್ಕಳು ಸಹಜವಾಗಿಯೇ ಪ್ರತಿಭಾವಂತರಿರುತ್ತಾರೆ. ಇಂತಹ ವೇದಿಕೆಗಳು
ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನೆರವಾಗಲಿವೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ್ ಮಾತನಾಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಭೌತಿಕ ಮತ್ತು ದೈಹಿಕ ಸಾಮರ್ಥ್ಯ ಉತ್ತಮವಾಗಿರುತ್ತದೆ. ಹಾಗಾಗಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಗಮನ ಸೆಳೆಯಿತು.
ಮುಖ್ಯ ಶಿಕ್ಷಕ ದೇವರಾಜ್, ತಟ್ಟೆಕೆರೆ ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವ್, ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಮಹದೇವ್, ಕಾರ್ಯದರ್ಶಿ ಪ್ರಸನ್ನ, ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಸಂಪನ್ಮೂಲ ವ್ಯಕ್ತಿ ಲಾವಣ್ಯಾ ಇತರರು ಇದ್ದರು.