ಅಂಗಡಿ ಬಂದ್ ಮಾಡಲು ವರ್ತಕರ ನಿರ್ಧಾರ

26han-3
Published on

ಹನಗೋಡು : ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಹನಗೋಡಿನಲ್ಲಿ ಜೂ.27ರಿಂದ ಜುಲೈ 5ರತನಕ ಮಧ್ಯಾಹ್ನ 2 ಗಂಟೆಯಿಂದ ಬೆಳಗಿನ ಜಾವ 6 ಗಂಟೆವರೆಗೆೆ ಅಂಗಡಿಗಳನ್ನು ಲಾಕ್‌ಡೌನ್ ಹಾಗೂ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಲು ಹನಗೋಡು ವರ್ತಕರ ಸಂಘದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಶುಕ್ರವಾರ ಸಂಜೆ ಹನಗೋಡು ವರ್ತಕರ ಸಂಘದ ಅಧ್ಯಕ್ಷ ಲಾಧುರಾಮ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವರ್ತಕರು, ಹೋಟೆಲ್ ಮಾಲೀಕರು, ರಸ್ತೆಬದಿ ವ್ಯಾಪಾರಿಗಳ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದ ಸಂಘದ ಮಾಜಿ ಕಾರ್ಯದರ್ಶಿ ಎಚ್.ಬಿ.ಹನುಮಂತು, ಕರೊನಾ ಹರಡುವುದನ್ನು ತಡೆಯಲು ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ವ್ಯಾಪಾರಸ್ಥರು ಜೂ.27ರಿಂದ ಜುಲೈ 5ರ ತನಕ ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ ಎಲ್ಲ ರೀತಿಯ ವ್ಯಾಪಾರ ಮಾಡಬಹುದು. ಮಧ್ಯಾಹ್ನ 2ರ ನಂತರ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಬಂದ್ ಮಾಡಬೇಕು. ಮಧ್ಯಾಹ್ನ 2ರ ನಂತರ ಸಾರ್ವಜನಿಕರ ಓಡಾಟಕ್ಕೂ ನಿರ್ಬಂಧ ಹೇರುವಂತೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಲಾಧುರಾಮ್ ಮಾತನಾಡಿ, ವ್ಯಾಪಾರಕ್ಕಿಂತ ಜೀವ ಉಳಿಸಲು ಸರ್ಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.

ಮದ್ಯದ ಅಂಗಡಿಗಳನ್ನು ಮುಚ್ಚಿಸಿ: ಹನಗೋಡಿನಲ್ಲಿರುವ 4 ಮದ್ಯದಂಗಡಿಗಳನ್ನು ಮಧ್ಯಾಹ್ನದ ನಂತರ ಬಂದ್ ಮಾಡಿಸಿದರೆ ಜನರ ಓಡಾಟ ಕಡಿಮೆಯಾಗುತ್ತದೆ ಎಂಬುದನ್ನು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕೆಂದು ಪಿಡಿಒ ನಾಗೇಂದ್ರಕುಮಾರ್, ಪೊಲೀಸ್ ಇಲಾಖೆಯ ರಾಜೇಂದ್ರ ಅವರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net