

ನಂಜನಗೂಡು: ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಕರೂ ಆದ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಶನಿವಾರ ಕುಟುಂಬ ಸಮೇತ ತಾಲೂಕಿನ ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಕರ್ತೃ ಗದ್ದುಗೆಗೆ ಆಗಮಿಸಿದ ಅವರನ್ನು ಶ್ರೀಮಠದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ನಂತರ ಶ್ರೀ ಶಿವರಾತ್ರಿ ಶಿವಯೋಗಿಗಳ ಗದ್ದುಗೆ ದರ್ಶನ ಪಡೆದ ಅವರು, ಬಳಿಕ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಕೆಲಹೊತ್ತು ಸಮಾಲೋಚನೆ ನಡೆಸಿದರು.
ಭಕ್ತರು ಹಾಗೂ ಶ್ರೀಗಳ ಸಮ್ಮುಖದಲ್ಲಿ ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಂಸಲೇಖ ಅವರು ಕೀಬೋರ್ಡ್ ನುಡಿಸಿ ಸಾಥ್ ನೀಡಿದರು.
‘ನನಗಿಂತ ಸಾಕಷ್ಟು ಸಾಧನೆ ಮಾಡಿರುವ ಸಾಧಕರು ತೆರೆಮರೆಯಲ್ಲಿದ್ದಾರೆ. ನನಗೆ ನಾಡಹಬ್ಬ ದಸರಾ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿರುವುದು ಅನಿರೀಕ್ಷಿತವಾದರೂ, ನಮ್ಮಂತವರಿಗೆ ಅವಕಾಶ ಸಿಕ್ಕಿರುವುದು ಸಂತಸದ ವಿಚಾರ. ನನ್ನನ್ನು ಆಯ್ಕೆ ಮಾಡಿರುವುದು ಸಾಧನೆ ಮಾಡಿರುವ ಎಷ್ಟೋ ಸಂಕೋಚ ಜೀವಿಗಳಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ’ ಎಂದು ಹಂಸಲೇಖ ನುಡಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಡಾ.ಹಂಸಲೇಖ, ಲತಾ ಹಂಸಲೇಖ ಹಾಗೂ ಅವರ ಕುಟುಂಬದವರನ್ನು ಆಶೀರ್ವದಿಸಿ ಗೌರವಿಸಿದರು.