ಹಂಪಿಯಲ್ಲಿ ವಿಜೃಂಭಣೆಯ ಜೋಡಿ ರಥೋತ್ಸವ

IMG-20250412-WA0032
Published on

ಹೊಸಪೇಟೆ: ದಕ್ಷಿಣಕಾಶಿ ಹಂಪಿಯ  ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ನಿಮಿತ್ತ ದೇಗುಲದಲ್ಲಿ ಶ್ರೀಕೃಷ್ಣದೇವರಾಯ ತಮ್ಮ ಪಟ್ಟಾಭಿಷೇಕ ಸಮಯದಲ್ಲಿ ಸಮರ್ಪಣೆ ಮಾಡಿದ ರತ್ನಖಚಿತ ಸ್ವರ್ಣಮುಖ ಕಿರೀಟದಿಂದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ ಬ್ರಹ್ಮರಥೋತ್ಸವದ ಮಡಿತೇರು ಎಳೆಯಲಾಯಿತು. ಸಂಜೆ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ರಥ ಮುಕ್ತಿಬಾವುಟ ಹಂಪಿಯ ಐ.ನಾಗರಾಜ್ 1.8 ಲಕ್ಷ ರೂ. ಹಾಗೂ ಶ್ರೀ ಚಂದ್ರಮೌಳೇಶ್ವರ ಮುಕ್ತಿಬಾವುಟ ಮರಿಯಮ್ಮನಹಳ್ಳಿಯ ಕಟಗಿ ಅಂಬಣ್ಣ 25 ಸಾವಿರ ರೂ.ಗೆ ಮುಕ್ತಿಬಾವುಟ ಹರಾಜು ಜರುಗಿತು. ಸಂಜೆ ಆಗುತ್ತಿದ್ದಂತೆ ಶ್ರೀ ಪಂಪಾವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥವನ್ನು ಸಹಸ್ರಾರು ಭಕ್ತರು ಜಯಕಾರದೊಂದಿಗೆ ಎಳೆದರು.

ದೇಗುಲದಿಂದ ಹೊರಟ ರಥವನ್ನು ಎದುರು ಬಸವಣ್ಣ ಮಂಟಪದವರೆಗೆ ಎಳೆದು ಮತ್ತೆ ಸ್ವಸ್ಥಾನಕ್ಕೆ ತರಲಾಯಿತು. ನಗರ ಹಾಗೂ ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಯುವಕರು ಉಭಯ ರಥಗಳಿಗೆ ಸನ್ನೆ ಹಾಕಿದರು. ಸಂಪ್ರದಾಯದಂತೆ ಶ್ರೀ ವಿದ್ಯಾರಣ ಭಾರತಿ ಸ್ವಾಮೀಜಿಯವರು, ನವಾಬರು ನೀಡಿದ್ದ ಪೊಷಾಕು ಧರಿಸಿದ್ದರು.

ಬ್ರಹ್ಮರಥೋತ್ಸವ ನಿಮಿತ್ತ ಶ್ರೀರಾಮ ನವಮಿಯಿಂದ 9 ದಿನಗಳ ಕಾಲ ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ ಸಿಂಹವಾಹನೋತ್ಸವ, ಚಂದ್ರಮಂಡಲ ವಾಹನೋತ್ಸವ, ಸೂರ್ಯಪ್ರಭ ವಾಹನೋತ್ಸವ, ಶೇಷವಾಹನೋತ್ಸವ, ಪುಷ್ಪಮಂಟಪ ವಾಹನೋತ್ಸವ, ಗಜವಾಹನೋತ್ಸವವನ್ನು ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net