ಹಂಪಿ ಉತ್ಸವಕ್ಕೆ ತಟ್ಟುತ್ತಾ ಸೂರ್ಯ ಶಾಖ?

03 MANJU 01
Published on

ಹೊಸಪೇಟೆ: ಬರಗಾಲ, ಅತಿವೃಷ್ಟಿ ಸೇರಿದಂತೆ ಇತರ ಕಾರಣಗಳಿಂದ ನಿರ್ಲಕ್ಷ್ಯ ತೋರಲಾಗುತ್ತಿರುವ ಹಂಪಿ ಉತ್ಸವವನ್ನು ಈ ಬಾರಿ ಫೆ.28, ಮಾ.1 ಮತ್ತು 2 ರಂದು ಆಯೋಜಿಸಲಾಗಿದೆ. ಬೇಸಿಗೆ ಆರಂಭಹಿನ್ನೆಲೆಯಲ್ಲಿ ತಾಪಮಾನ ಹೆಚ್ಚಿರುವುದರಿಂದ ಹಂಪಿ ಉತ್ಸವಕ್ಕೆ ಜನಸ್ಪಂದನೆ ಸಿಗುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ. ಈ ಕಾರಣದಿಂದ ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಉತ್ಸವವನ್ನು ನವೆಂಬರ್‌ನಲ್ಲಿ ಆಚರಣೆ ಆರಂಭಿಸಿದ್ದರು. ಜನವರಿ ಹಾಗೂ ಫೆಬ್ರುವರಿಯಲ್ಲೂ ಆಚರಣೆಗೆ ಪೂರಕ ವಾತಾವರಣ ಇರಲಿದೆ.

ಆದರೆ, ಮಾರ್ಚ್‌ನಲ್ಲಿ ಬಿಸಲಿನ ಹೊಡೆತಕ್ಕೆ ಜನರು ಹೊರಗೆ ಬರುವುದೇ ಕಷ್ಟವಾಗಿರುತ್ತದೆ. ಕಳೆದ ಬಾರಿಗಿಂತ ಈ ಸಲ ಒಂದು ತಿಂಗಳು ವಿಳಂಬವಾಗಿ, ಬೇಸಿಗೆಯಲ್ಲಿ ಉತ್ಸವ ಅಯೋಜಿಸಲಾಗಿದೆ. ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿ ಉತ್ಸವ ಉದ್ಘಾಟನೆ ಮಾಡಲಿದ್ದಾರೆ. ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ ನಾನಾ ಕಡೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹಂಪಿ ಉತ್ಸವ ಉತ್ಸವವನ್ನು ಹೋರಾಟ ಮಾಡಿಯೇ ಆಯೋಜಿಸುವ ಪರಂಪರೆ ಮುಂದುವರಿದಿದೆ. ಕಾಲ ಕಾಲಕ್ಕೆ ಸರ್ಕಾರಗಳು ಬದಲಾದಂತೆ ಉತ್ಸವದ ದಿನಾಂಕಗಳು ಕೂಡ ಬದಲಾಗುತ್ತಾ ಸಾಗಿದೆ. ಹಾಗಾಗಿ ಹಂಪಿ ಉತ್ಸವ ಒತ್ತಾಯದ ಉತ್ಸವವಾಗಿ ಮಾರ್ಪಾಡಾಗುತ್ತಿದೆ ಎಂಬುದು ಭಾಗದ ಕಲಾವಿದರ ಅಳಲು. ಈ ಬಾರಿ ಮತ್ತಷ್ಟು ತಡವಾಗಿ ಆಚರಣೆ ಮಾಡಲಾಗುತ್ತಿದೆ.

ನವೆಂಬರ್‌ನಲ್ಲಿ ಆಚರಣೆ ಸೂಕ್ತವೇಕೆ ?

ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಹಂಪಿ ಉತ್ಸವದ ರೂವಾರಿ. ನವೆಂಬರ್‌ನಲ್ಲೇ ಉತ್ಸವ ನಡೆಸುತ್ತಿದ್ದರು. ನವೆಂಬ‌ರ್ ಮಳೆಗಾಲದ ಕೊನೆಯ ದಿನಗಳಾಗಿರುತ್ತದೆ. ಈ ಭಾಗದಲ್ಲಿ ಉತ್ತಮ ವಾತಾವರಣ ಇರುತ್ತದೆ ಎಂಬುದು ಇದಕ್ಕೆ ಕಾರಣವಾಗಿತ್ತು. ನಂತರ ಬಿಜೆಪಿ ಸರ್ಕಾರಗಳು ಬಹುತೇಕ ಜನವರಿಯಲ್ಲಿ ಆಚರಣೆ ಮಾಡಿದವು. ಈ ಬಾರಿ ಮಾರ್ಚ್‌ನಲ್ಲಿ ಆಚರಣೆಗೆ ದಿನಾಂಕ ನಿಗದಿಯಾಗಿದೆ. ಬಿಸಲಿನ ತಾಪ ಹೆಚ್ಚಿರುವುದರಿಂದ ಉತ್ಸವಕ್ಕೆ ಸಿದ್ಧತೆ ನಡೆಸುವ ಕಾರ್ಮಿಕ ವರ್ಗ, ಅಧಿಕಾರಿಗಳು ಹೈರಾಣ ಆಗಲಿದ್ದಾರೆ. ಇನ್ನು ಉತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.

ಕಳೆದ ವರ್ಷ ಯಶಸ್ವಿಯಾಗಿ ಹಂಪಿ ಉತ್ಸವ ನಡೆಸಲಾಗಿತ್ತು. ಜನಸಾಗರವೇ ಹಂಪಿ ಕಡೆ ಮುಖ ಮಾಡಿತ್ತು. ಈ ಬಾರಿಯೂ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಕೂಡ ಮಾರ್ಟ್‌ನಲ್ಲಿ ಉತ್ಸವ ಆಯೋಜಿಸಲಾಗಿದೆ. | ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net