

ವಿ.ಕೆ. ರವೀಂದ್ರ ಹಂಪಿ
ಜಗತ್ತಿನಲ್ಲಿ ಎಂದೂ ಮುಳಗದ ಸಾಮ್ರಾಜ್ಯವಾಗಿ ಭರವಸೆ ಮೂಡಿಸಿದ್ದ ವಿಜಯನಗರ ಆಡಳಿತದ ಗತವೈಭವ ಬಿಂಬಿಸುವ ಹಂಪಿ ಉತ್ಸವಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ನಂತರ ದೀಪಾಲಂಕಾರದ ಬೆಳಕಲ್ಲಿ ಉತ್ಸವ ಕಂಗೊಳಿಸುತ್ತಿದೆ. ಕಲ್ಲು ಬಂಡೆಗಲ್ಲುಗಳಲ್ಲಿ ಹಾಸಿ ಹೊದ್ದು ಮಲಗಿರುವ ಸ್ಮಾರಕಗಳು ತನ್ನ ವೈಭವಪೇರಿತ ಇತಿಹಾಸ ವರ್ಣಿಸುತ್ತಿವೆ. ಬಳ್ಳಾರಿಯಿಂದ ಬೇರಾಗಿ ವಿಜಯನಗರ ಪ್ರತ್ಯೇಕ ಜಿಲ್ಲೆಯಾದ ನಂತರ ಮೂರನೇ ಬಾರಿ ನಡೆದ ಉತ್ಸವಕ್ಕೆ ತಾರಾ ಮೆರುಗು ಸಿಕ್ಕಿತು.
ಮೂರು ದಿನಗಳ ನಡೆವ ಉತ್ಸವದಲ್ಲಿ ಸಾಹಸ ಕ್ರೀಡೆ, ಗೋಡೆ ಬರಹ, ಸಿರಿಧಾನ್ಯ ಪಾಕ ಇತರ ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸಿಲ್ಲ. ಕಳೆದ ಬಾರಿ ಕೈ ಬಿಟ್ಟಿದ್ದ ಜಲಕ್ರೀಡೆ ಈ ಬಾರಿ ಹಮ್ಮಿಕೊಂಡಿದ್ದು ವಿಶೇಷ. ಗಾಯತ್ರಿ ಪೀಠ ಬಳಿಯ ಎಂ.ಪಿ.ಪ್ರಕಾಶ ಮುಖ್ಯ ವೇದಿಕೆ, ವಿರೂಪಾಕ್ಷ ದೇವಾಲಯ, ಎದುರು ಬಸವಣ್ಣ, ಮಹಾನವಮಿ ದಿಬ್ಬ ಹಾಗೂ ಸಾಸುವೆ ಕಾಳು ಗಣಪ ಕಡೆ ಒಟ್ಟು ಐದು ವೇದಿಕೆ ನಿರ್ಮಿಸಲಾಗಿದೆ.
ಜನರನ್ನು ಕರೆದೊಯ್ಯಲು ಕಮಲಾಪುರ, ಹೊಸಪೇಟೆಯಿಂದ 200ಕ್ಕೂ ಹೆಚ್ಚು ಸಾರಿಗೆ ಬಸ್‌ಗಳನ್ನು ಬಿಡಲಾಗಿದೆ. ನೇರವಾಗಿ ಹಂಪಿಗೆ ಓಡಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗಿನ ಅವಧಿಗೆ ಅಷ್ಟಾಗಿ ಜನರು ಬಸ್‌ಗಳಲ್ಲಿ ಕಾಣಿಸಲಿಲ್ಲ. ಸಂಜೆ ಬಸ್‌ಗಳ ಸಂಚಾರ ಹೆಚ್ಚಿತು. ರಸ್ತೆಯಿಂದ ಮುಖ್ಯ ವೇದಿಕೆ ಸಂಪರ್ಕಿಸುವ ದಾರಿಯಲ್ಲಿ ಒಟ್ಟು ಐದು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಯಿತು. ಉಳಿದಂತೆ ಮಹಾನವಮಿ ದಿಬ್ಬ ವೇದಿಕೆ, ಕಮಲಾಪುರ ಎತ್ತು ಪ್ರದರ್ಶನ ಬಳಿ ಪಾರ್ಕಿಂಗ್ ನೀಡಲಾಗಿದೆ.
ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಬೆಳಗಿನ ಅವಧಿಗೆ ಮಹಿಳಾ ಕವಿಗೋಷ್ಠಿ ನೆರವೇರಿದರೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಕಣ್ಣಿಗೆ ಹಬ್ಬ ನೀಡಿದವು. ಶಾಲಾ ಮಕ್ಕಳ ಆದಿಯಾಗಿ ಎಲ್ಲರೂ ಚಿಂತಕರ ವಿಚಾರಕ್ಕೆ ಹಾಗೂ ಕವಿಗಳ ವಿನೂತನ ಕಾವ್ಯಕ್ಕೆ ಕಿವಿಯಾದರು. ಮಹಿಳೆ, ಯುವತಿಯರು, ಪುರುಷರು ವಿರೂಪಾಕ್ಷೇಶ್ವರನ ರಥ ಬೀದಿಯಲ್ಲಿ ಹಾಕಿದ ತರಹೇವಾರಿ ಚಿತ್ತಾರದ ರಂಗೋಲಿಗಳು ನೋಡುಗರ ಮನದುಂಬಿದವು.
ಜನರು ದಾರಿಯುದ್ದಕ್ಕೂ ಅವು ಗಳನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಸಾಸುವೆಕಾಳು ಗಣಪತಿ, ಮಹಾ ನವಮಿ ದಿಬ್ಬ, ಎದುರು ಬಸವಣ್ಣ ವೇದಿಕೆಯಲ್ಲಿ ನೆರವೇರಿದ ಸಂಗೀತ, ನೃತ್ಯ, ನಾಟಕ, ಬಯಲಾಟ, ಸ್ಥಳೀಯ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನರು ಹರ್ಷಗೊಂಡರು. ವಿವಿಧ ಟಿವಿ ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡಿದ ಕಲಾ ವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕೃಷಿ, ಫಲ-ಪುಷ್ಪ, ಪುಸ್ತಕ ಹಾಗೂ ಮೀನುಗಾರಿಕೆ ಮೇಳ ವಿಶಾಲವಾಗಿವೆ.
ಇಂದಿನ ಕಾರ್ಯಕ್ರಮಗಳು
ಎಂ.ಪಿ.ಪ್ರಕಾಶ ವೇದಿಕೆಯಲ್ಲಿ ಸಂಜೆ ಎರಡನೇ ದಿನದ ವೇದಿಕೆ ಕಾರ್ಯಕ್ರಮ ಇರಲಿದೆ. ಚಿತ್ರ ನಟರಾದ ಉಪೇಂದ್ರ, ವಸಿಷ್ಠ ಸಿಂಹ, ನಟಿಯರಾದ ಪ್ರಿಯಾಂಕಾ ಉಪೇಂದ್ರ, ಪೂಜಾ ಗಾಂಧಿ ಭಾಗವಹಿಸುವರು. ಕಿರುತೆರೆ ರಂಜಕರಾದ ಶರಣ್ಯ ಶೆಟ್ಟಿ, ಮೋಕ್ಷ ಕುನಾಲ್, ದಿವ್ಯಾ ಆಲೂರು, ರಜನಿ ಬೀಟ್ ಗುರು, ನಿರೂಪಕಿ ಅನುಶ್ರೀ ಭಾಗಿಯಾಗುವರು.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ತಂಡದಿಂದ ರಸಮಂಜರಿ ಕಾರ್ಯಕ್ರಮ, ಸರಿಗಮಪ ಖ್ಯಾತಿಯ ಗಾಯಕ ಬಾಳು ಬೆಳಗುಂದಿ ಗಾಯನ ಹಾಗೂ ಕಾಮಿಡಿ ಕಿಲಾಡಿ ತಂಡದಿಂದ ಕಾಮಿಡಿ ಷೋ ಇರಲಿದೆ. ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಕವಿಗೋಷ್ಠಿ, ಉಳಿದ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಇರಲಿದೆ.