ಹಂಪಿ ಪ್ರವಾಸ ಬಲು ಪ್ರಯಾಸ!

oplus_0
oplus_0
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ದೇಶ, ವಿದೇಶಿಗರನ್ನು ಸೆಳೆಯುವ ವಿಶ್ವವಿಖ್ಯಾತ ತಾಣ ಹಂಪಿ ಈಗ ಪ್ರವಾಸಿಗರ ಪಾಲಿಗೆ ಪ್ರಯಾಸ ತಾಣವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರು ಮೂಲಸೌಕರ್ಯಗಳ ಸಮಸ್ಯೆಯಿಂದಾಗಿ ತೊಂದರೆ ಎದುರಿಸುವುದು ಈಗ ನಿತ್ಯ ಬವಣೆಯಾಗಿ ಮಾರ್ಪಟ್ಟಿದೆ.

ಹಂಪಿಯನ್ನು 1986ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದೆ. ಈ ಕ್ಷೇತ್ರ ಪ್ರವಾಸೋದ್ಯಮದ ಆಕರ್ಷಣೆಯಾಗಿರುವುದು ಮಾತ್ರವಲ್ಲದೆ 'ದಕ್ಷಿಣ ಕಾಶಿ' ಎಂದೂ ಖ್ಯಾತಿ ಗಳಿಸಿದೆ. ಸಂಶೋಧಕರು, ಇತಿಹಾಸಕಾರರು, ಭಕ್ತರು, ಪ್ರವಾಸಿಗರ ಶ್ರೇಷ್ಠ ತಾಣವಾದ ಹಂಪಿ ನಿರ್ವಹಣೆ ಕೇಂದ್ರ ಹಾಗೂ ರಾಜ್ಯ ಪುರಾತತ್ವ, ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ, ಹಂಪಿ ಮತ್ತು ಬುಕ್ಕಸಾಗರ ಗ್ರಾಮ ಪಂಚಾಯಿತಿಗೆ ಸೇರಿದೆ. ಇಷ್ಟಾದರೂ ಇಲ್ಲಿನ ಮೂಲಸೌಕರ್ಯ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಏನೆಲ್ಲ ಸಮಸ್ಯೆಗಳಿವೆ?:

ರಾಣಿ ಸ್ನಾನಗೃಹದ ಸನಿಹ ಕುಡಿಯುವ ನೀರು ಹಾಗೂ ಶೌಚಗೃಹಕ್ಕೂ ನೀರಿನ ಸೌಲಭ್ಯವಿಲ್ಲ. ಚಕ್ರತೀರ್ಥ ಬಳಿ ಯಾತ್ರಿಕರಿಗೆ ಸ್ನಾನ ಮಾಡಿದ ಬಳಿಕ ಬಟ್ಟೆ ಬದಲಿಸಲು ವ್ಯವಸ್ಥೆ ಕಲ್ಪಿಸಿಲ್ಲ, ಶೌಚಗೃಹವೂ ಇಲ್ಲಿಲ್ಲ. ವಿಜಯ ವಿಠಲ ದೇಗುಲಕ್ಕೆ ಹೋಗುವ ವಾಹನಗಳು ನಿಲುಗಡೆ ಮಾಡುವ ಗೆಜ್ಜಲ ಮಂಟಪ ಬಳಿ ಇರುವ ಶೌಚಗೃಹ ಗಬ್ಬು ನಾರುತ್ತಿದೆ. ಗೆಜ್ಜಲ ಮಂಟಪ, ಉಗ್ರ ನರಸಿಂಹ, ಕಮಲ ಮಹಲ್, ವಿರೂಪಾಕ್ಷ ದೇಗುಲ ಸೇರಿ ಇತರೆಡೆ ಪಾರ್ಕಿಂಗ್‌ಗಳಲ್ಲಿ ಹೊಂಡ, ತಗ್ಗುಗಳು ಮುಕ್ತಿಕಂಡಿಲ್ಲ.ಸಾವಿರಾರು ವಾಹನಗಳು ಸರ್ಕಸ್ ಮಾಡುತ್ತಲೇ ನಿಲ್ಲಬೇಕಿವೆ. ನೆಲವನ್ನು ಸಮತಟ್ಟು ಗೊಳಿಸುವ ಕನಿಷ್ಠ ಕೆಲಸವೂ ಆಗಿಲ್ಲ. ಪುರಂದರ ಮಂಟಪದಿಂದ ನರಹರಿ ತೀರ್ಥರ ಬೃಂದಾವನ ದಾರಿಯಂತೂ ಹೇಳತೀರದು. ಬಳ್ಳಾರಿ ಜಾಲಿ ಗಿಡ ಗಳನ್ನು ಕೋಲಿನಿಂದ ಸರಿಸುತ್ತ, ಕಾಡು ದಾರಿಯಂತೆ ಸಾಗಬೇಕಿದೆ.

ಸಮಸ್ಯೆಗೆ ಏನು ಕಾರಣ?

ಹಂಪಿ 1986ರಲ್ಲೇ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿ ಸೇರಿದೆ. ಹೀಗಾಗಿ ಇಲ್ಲಿ ಪ್ರತಿ ಕಾರ್ಯ ಆರಂಭಿಸುವುದಕ್ಕೂ ಕೇಂದ್ರ ಪುರಾತತ್ವ ಇಲಾಖೆ (ಎಎಸ್‌ಐ) ಅನುಮತಿ ಕಡ್ಡಾಯ. ಆದರೆ 57 ಪ್ರಮುಖ ಸ್ಮಾರಕಗಳಿಗೆ ರಕ್ಷಣೆ ಸೌಲಭ್ಯ ಕಲ್ಪಿಸುವ ಹೊಣೆಹೊತ್ತ ಎಎಸ್‌ಐ ತುರ್ತು ಸ್ಪಂದಿಸದಿರುವುದೇ ಸಮಸ್ಯೆಗೆ ಕಾರಣ ಎಂಬುದು ಸ್ಥಳೀಯರ ಆರೋಪ. ಇದರ ಜತೆಗೆ ಇಲಾಖೆಗಳ ಸಮನ್ವಯ ಕೊರತೆಯೂ ಕಾರಣ ಎಂಬ ಮಾತು ಕೇಳಿಬಂದಿದೆ

ಹಂಪಿ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದೆ. ಇಲ್ಲಿ ಮೂಲಸೌಕರ್ಯ ನೀಡುವುದು ಕರ್ತವ್ಯವಾಗಿದೆ. ನಿಯಮಾನುಸಾರ ಅಭಿವೃದ್ಧಿಪಡಿಸಲು ಅಧಿಕಾರಿಗಳ ಸಭೆ ಕರೆಯುತ್ತೇವೆ. ಅಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಲಾಗುವುದು. ಕವಿತಾ ಎಸ್. ಮನ್ನಿಕೇರಿ ವಿಜಯನಗರ ಜಿಲ್ಲಾಧಿಕಾರಿ ಎಎಸ್ಐ ನಮಗೆ ಏನೂ ಮಾಹಿತಿ ನೀಡದೇ ಕೆಲ ನಿರ್ಧಾರ ಕೈಗೊಳ್ಳುತ್ತದೆ. ಇಲ್ಲಿ‌ ಅಭಿವೃದ್ಧಿ ಪಡಿಸೋಕೆ ಅನುಮತಿ ಕೂಡ ಸಿಗಲ್ಲ. ಅವರಾದರೂ ಅಭಿವೃದ್ಧಿ ಪಡಿಸಲಿ. ನಮಗೂ ಬಿಡಲ್ಲ, ಎಎಸ್ಐ ಕೂಡ ಮಾಡಲ್ಲ. ಇದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಪ್ರವಾಸಿಗರಿಗೆ ಅನುಕುಲ ಆಗುವಂತೆ ಅಭಿವೃದ್ಧಿ ಆಗಬೇಕಿದೆ. - ರಮೇಶ್, ಹವಾಮ ಆಯುಕ್ತ, ಹಂಪಿ ಇಲ್ಲಿನ ಸಮಾಸ್ಯೆ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಪಡಿಸಲು ಸಿದ್ದರಿದ್ದೇವೆ. ಆದರೆ, ನಮಗೆ ಎಎಸ್ಐ ಅಡ್ಡಪಡಿಸುತ್ತದೆ. ಕೇಂದ್ರದಿಂದ ಮಾಡಿದರೂ ಪ್ರವಾಸಿಗರಿಗೆ ಅನುಕೂಲ ಆಗಲಿದೆ. - ಪ್ರಭುಲಿಂಗ ತಳಿಕೇರಿ, ಡಿಡಿ, ಪ್ರವಾಸೋದ್ಯಮ ಇಲಾಖೆ, ಹಂಪಿ ಹಂಪಿಯಲ್ಲಿನ ಯಾವುದೇ ಮಾಹಿತಿ ಬೇಕು ಎಂದರೆ ನೀವು ದೆಹಲಿಯ ಕೇಂದ್ರ ಕಚೇರಿಗೆ ಕೇಳಿ. ನಾವು ಯಾವುದೇ ಅಭಿಪ್ರಾಯ ನೀಡುವುದಿಲ್ಲ. - ರಾಮಕೃಷ್ಣ ರೆಡ್ಡಿ, ಎಎಸ್ಐ ಅಧೀಕ್ಷಕ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net