

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಮಾತಂಗ ಪರ್ವತದ ಗುಹೆ ಒಂದಕ್ಕೆ ಕಾಲು ಜಾರಿ ಬಿದ್ದ ಪ್ರವಾಸಿಗನ್ನು ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡ ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಮಧ್ಯಪ್ರದೇಶ ಭೋಪಾಲ್‌ನ ಪರ್ವ ಅಸತ್ (18) ಯುವ ಪ್ರವಾಸಿಗ. ಕಳೆದ ಮುರ್ನಾಲ್ಕು ದಿನಗಳಿಂದ ಹಂಪಿ ಪ್ರವಾಸ ಕೈಗೊಂಡಿರುವ ಯುವಕ ಭಾನುವಾರ ಮಧ್ಯಾಹ್ನ ಮಾತಂಗ ಪರ್ವತ ಹತ್ತಿದ್ದಾನೆ. ಈ ವೇಳೆ ಪರ್ವದ ಮಧ್ಯ ಭಾಗದಲ್ಲಿ ಇಣುಕಿ ನೋಡುವ ವೇಳೆ ಕಾಲು ಜಾರಿ ಗುಹೆಯ ಬಿದ್ದಿದ್ದ.
ಅಂದಾಜು 15 ರಿಂದ 20 ಅಡಿ ಅಳದ ಕಲ್ಲು ಬಂಡೆಗಳ ನಡುವೆ ಸಿಲುಕಿಕೊಂಡಿದ್ದ. ಯುವಕ ಬಂಡೆ ಹತ್ತಲು ಆಗದೆ ಇದ್ದಾಗ 112 ಸಹಾಯ ವಾಣಿಗೆ ಕರೆ ಮಾಡಿದ್ದಾನೆ. ಹಂಪಿ ಪ್ರವಾಸಿ ಪೊಲೀಸ್ ಠಾಣೆಗೆ ಬಂದ ಮಾಹಿತಿಗೆ ಹಿನ್ನೆಲೆಯಲ್ಲಿ ಪಿಎಸ್‌ಐ ಸುಬ್ರಹ್ಮಣ್ಯ ನೇತೃತ್ವದಲ್ಲಿ ಹಗ್ಗ ಸಹಿತ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಮತ್ತು ಅಗ್ನಿ ಶಾಮಕ ದಳದಿಂದ ಸುರಕ್ಷಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪ್ರವಾಸಿಗನಿಗೆ ಯಾವುದೆ ಗಾಯಗಳಾಗದೇ ಪ್ರಾಣಪಾಯದಿಂದ ಪಾರಾಗಿದ್ದಾನೆ.