

ಹೊಸಪೇಟೆ: ಮಹಾನವಮಿ ಅಮಾವಾಸ್ಯೆಯ ದಕ್ಷಿಣ ಕಾಶಿ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆಯಿಂದ ಮೂರ್ತಿಗೆ ಪಂಚಾಭಿಷೇಕ, ರುದ್ರಾಭಿಷೇಕ, ಮಹಾ ಮಂಗಳಾರತಿ ಕೈಗೊಂಡು ನೈವೇದ್ಯ ಸಮರ್ಪಿಸಲಾಯಿತು. ವಿರೂಪಾಕ್ಷೇಶ್ವರ ಉತ್ಸವ ಮೂರ್ತಿಗೆ ಪಲ್ಲಕ್ಕಿ ಸೇವೆ ಸಲ್ಲಿಸಲಾಯಿತು. ಪಂಪಾದೇವಿ ಹಾಗೂ ಭುವನೇಶ್ವರಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪ್ರವಾಸಿ ಮಾರ್ಗದರ್ಶಿಗಳಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಅಮಾವಾಸ್ಯೆಯ ನಿಮಿತ್ತ ಹಂಪಿಯಲ್ಲಿನ ದೇಗುಲಗಳ ದರ್ಶನಕ್ಕೆ ಅಂದಾಜು 12 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಬೆಳಗಿನ ಜಾವ ಇಲ್ಲಿನ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದರು. ದೇವರಿಗೆ ಹಣ್ಣು, ಕಾಯಿ, ಕರ್ಪೂರ, ಊದಿನ ಕಡ್ಡಿ ಸಮರ್ಪಿಸಿದರು. ದೇವಸ್ಥಾನ ಆವರಣ ಸೇರಿದಂತೆ ಹಂಪಿ ಪ್ರದೇಶದಲ್ಲಿ ಭಕ್ತರ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಉತ್ಸಾಹ ತೋರಿದ್ದು, ಗಮನ ಸೆಳೆಯಿತು. ಉದ್ಧಾನ ವೀರಭದ್ರ ದೇಗುಲದಲ್ಲಿ ಕೂಡ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ನವರಾತ್ರಿ ನಿಮಿತ್ತ ಒಂಬತು ದಿನಗಳ ಕಾಲ ಹಂಪಿಯ ವಿರೂಪಾಕ್ಷೇಶ್ವರ ದೇಗುಲದಲ್ಲಿನ ಪಂಪಾದೇವಿ ಹಾಗೂ ಭುವನೇಶ್ವರಿ ದೇವಿಗೆ ವಿಶೇಷ ಪೂಜಾ ಕಾರ್ಯ ಹಾಗೂ ವಿಶೇಷ ಅಲಂಕಾರ ನಡೆಸಲಾಗುತ್ತದೆ. ಭಕ್ತರಿಂದ ವಿಶೇಷ ಸೇವೆ ಕೂಡ ಸಲ್ಲಿಸುತ್ತಾರೆ.