ಪುರಂದರದಾಸರ ಮಹೋತ್ಸವಕ್ಕೆ 2 ವರ್ಷದಿಂದ ಬಾರದ ಅನುದಾನ

IMG-20250125-WA0014
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

  • ಕರ್ನಾಟಕ ಸಂಗೀತ ಪಿತಾಮಹ ಎಂದು ಕರೆಯಲ್ಪಡುವ ದಾಸ ಶ್ರೇಷ್ಠ ಶ್ರೀಪುರಂದರ ದಾಸರ ಮಹೋತ್ಸವಕ್ಕೆ ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ ಅನುದಾನ ಬಂದಿಲ್ಲ. ಈ ಬಾರಿಯೂ ಹೆಸರಿಗೆ ಮಾತ್ರ ನಡೆಯುವಂತಿದ್ದು, ಅನುದಾನ ಬಂದರೆ ಅದ್ದೂರಿ ಆಚರಣೆ. ಇಲ್ಲವಾದರೆ ಪೋಟೋ ಇಟ್ಟು ಪೂಜೆಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಪ್ರತಿ ವರ್ಷ ಪುಷ್ಯ ಮಾಸ ಕೃಷ್ಣಪಕ್ಷ ಅಮಾವಾಸ್ಯೆ ತಿಥಿಯಲ್ಲಿ ದಾಸ ಪರಂಪರೆಯಿಂದ ಮೂರು ದಿನಗಳ ಕಾಲ ಶ್ರೀ ಪುರಂದರ ದಾಸರ ಆರಾಧನೆ ನಡೆಯುತ್ತದೆ. ಕಳೆದ 15 ವರ್ಷಗಳಿಂದ ರಾಜ್ಯ ಸರ್ಕಾರದಿಂದ ಅಂದಾಜು 10 ಲಕ್ಷ ರೂ. ಅನುದಾನದಲ್ಲಿ ಮಧ್ಯಾರಾಧನೆಯ ಒಂದು ದಿನ ಆಚರಣೆ ಮಾಡುತ್ತದೆ. ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ ಮಹೋತ್ಸವಕ್ಕೆ ಅನುದಾನ ಬಾರದೇ ಮಂತ್ರಾಲಯದ ರಾಘವೇಂದ್ರ ಸ್ವಾಮಿಮಠದಿಂದ ಆರಾಧನೆ ನಡೆಯುತ್ತಿದೆ. ಈ ಭಾರಿ ಫೆ.29ರಂದು ಉತ್ಸವ ನಡೆಸಲು ಜಿಲ್ಲಾಡಳಿತ ಪೂರ್ವಭಾವಿ ಸಭೆ ನಡೆಸಿದೆ. ಆದರೆ ಬೆರಳೆಣಿಕೆಯಷ್ಟು ದಿನ ಮಾತ್ರ ಉಳಿದಿವೆ. ಸರ್ಕಾರದಿಂದ ಇನ್ನೂ ಅನುದಾನದ ಬಂದಿಲ್ಲ. ಈವರೆಗೂ ಕಾರ್ಯಕ್ರಮದ ಸಿದ್ಧತೆಗಳಿಗೆ ವೇಗ ದೊರೆಯದಿರುವುದು ಈ ಬಾರಿಯೂ ಪುರಂದರ ದಾಸರ ಆರಾಧನಾ ಮಹೋತ್ಸವ ಹೆಸರಿಗೆ ಮಾತ್ರ ನಡೆಯುವ ಸಾಧ್ಯತೆ ಇದೆ. ಜ.28ರಿಂದ ಜ.30ರವರೆಗೆ ಶ್ರೀಪುರಂದರ ದಾಸರ ಆರಾಧನೋತ್ಸವ. ನಾಡಿನಾದ್ಯಂತ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಪುರಂದರ ದಾಸರ ಆರಾಧನೆ ಸಡಗರದಿಂದ ನಡೆಯಲಿದೆ. ಹರಿದಾಸ ಸಾಹಿತ್ಯಕ್ಕೆ ಮಾತ್ರವಲ್ಲದೇ ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀಪುರಂದರ ದಾಸರ ಕೊಡುಗೆ ಅನನ್ಯ, ಅಪಾರವಾಗಿದೆ. ಕಳೆದ ಹಲವಾರು ವರ್ಷಗಳಿಂದ ರಾಜ್ಯ ಮಟ್ಟದ ಉತ್ಸವವಾಗಿ ಸರ್ಕಾರದಿಂದ ನಡೆಸಲಾಗುತ್ತಿದ್ದರೂ ಅನುದಾನದ ಕೊರತೆ ಹಾಗೂ ಸಮರ್ಪಕವಾಗಿ ಕಾಲ ಕಾಲಕ್ಕೆ ಅನುದಾನ ಬಿಡುಗಡೆ ಆಗದಿರುವುದರಿಂದ ಉತ್ಸವ ಸ್ಥಳೀಯ ಮಟ್ಟಕ್ಕೆ ಮಾತ್ರ ಎಂಬಂತಾಗಿದೆ. ರಾಜ್ಯ ಸರ್ಕಾರ ಹಲವಾರು ಉತ್ಸವಗಳಿಗೆ ತೋರಿಸುವ ಉತ್ಸಾಹ, ಕಾಳಜಿ ಶ್ರೀ ಪುರಂದರ ದಾಸರ ಮಹೋತ್ಸವಕ್ಕೆ ಅಷ್ಟಕಷ್ಟೇ ಎಂಬಂತಾಗಿದೆ ಎನ್ನುವುದು ದಾಸ ಸಾಹಿತ್ಯ ಪ್ರೇಮಿಗಳ ಅಳಲು. ಪುರಂದರ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ದೊರೆಯುವುದರಿಂದ ಕಲಾವಿದರಿಗೂ ಕೊಂಚ ಮಟ್ಟಿಗೆ ಸಹಕಾರಿಯಾಗಲಿದೆ. ಕಳೆದ ಕೆಲವು ವರ್ಷಗಳಿಂದ ಉತ್ಸವ ಆಚರಿಸಲಾಗುತ್ತಿದ್ದರೂ ಸಂಬಂಧಿಸಿದ ಇಲಾಖೆಗೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಉತ್ಸವಕ್ಕೂ ಅನುದಾನ ಬಿಡುಗಡೆ ಆಗುತ್ತದೆಯೋ ಅಥವಾ ಕಳೆದ ಬಾರಿಯಂತೆಯೇ ಈ ಬಾರಿಯೂ ಮುಂದುವರೆಯಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಪೂರ್ವಭಾವಿ ಸಭೆಗೆ ಸೀಮಿತ

ಶ್ರೀ ಪುರಂದರ ದಾಸರ ಮಹೋತ್ಸವ ಇದೇ ತಿಂಗಳು ಜ.29 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಜಿಲ್ಲಾಡಳಿತದಿಂದ ಸಿದ್ಧತೆ ಬಗ್ಗೆ ಸಭೆ ನಡೆಸಲಾಗಿದೆ. ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಬಿಟ್ಟರೆ ಆಹ್ವಾನ ಪತ್ರಿಕೆ, ಪೋಸ್ಟರ್, ಬ್ಯಾನರ್ ಮೂಲಕ ಎಲ್ಲಿಯೂ ಪ್ರಚಾರ ಇಲ್ಲ. ಯಾವ್ಯಾವ ಕಲಾವಿದರನ್ನು ಆಹ್ವಾನಿಸಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಲಭ್ಯವಿಲ್ಲ. ಪ್ರತಿ ಬಾರಿಯೂ ಹಂಪಿಯ ವಿರೂಪಾಕ್ಷ ದೇಗುಲದ ಆವರಣದಲ್ಲಿ ಉತ್ಸವ ಹಿನ್ನೆಲೆಯಲ್ಲಿ ಒಂದು ವೇದಿಕೆ ಮಾಡಲಾಗುತ್ತದೆ. ಆದರೆ, ಉತ್ಸವಕ್ಕೆ ಇನ್ನೂ ಮೂರು ದಿನ ಮಾತ್ರ ಬಾಕಿ ಇದ್ದು ವೇದಿಕೆ ಸಿದ್ಧತೆ ಬಗ್ಗೆ ಯಾವುದೇ ಮಾಹಿತಿ ఇల్ల.

ಶ್ರೀ ಪುರಂದರ ದಾಸರ ಮಹೋತ್ಸವ ನಡೆಸಲು ಪೂರ್ವ ಭಾವಿ ಸಭೆ ನಡೆಸಲಾಗಿದೆ. ಸರ್ಕಾರ ಮಟ್ಟದಲ್ಲಿ ಅನುದಾನದ ಚರ್ಚೆ ನಡೆಯುತ್ತಿದೆ. ವೇದಿಕೆ ಹಾಗೂ ಕಲಾವಿದರ ಸಿದ್ಧತೆ ಕೂಡ ನಡೆದಿದೆ. ಆದೇಶ ಬಂದ ಕೂಡಲೇ ಆಚರಣೆ ಮಾಡಲಾಗುತ್ತದೆ. ಇಲ್ಲವೆಂದರೆ ಸರಳವಾಗಿ ಆಚರಣೆ ಮಾಡಲಾಗುತ್ತದೆ. | ಎಂ.ಎಸ್.ದಿವಾಕರ ಜಿಲ್ಲಾಧಿಕಾರಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net