

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಶನಿವಾರ ದೇಶ- ವಿದೇಶಿ ಪ್ರವಾಸಿಗರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿರೂಪಾಕ್ಷೇಶ್ವರ ದೇಗುಲದ ರಥಬೀದಿಯಲ್ಲಿ ಪರಸ್ಪರ ಬಣ್ಣ ಎರಚಿ ಇಡೀ ವಿಶ್ವಕ್ಕೆ ಸಹೋದರತ್ವದ ಸಂದೇಶ ಸಾರಿದರು. ಕಳೆದ ಬಾರಿಗಿಂತ ಈ ಭಾರಿ ದೇಶ ವಿದೇಶಿಗರು ಹೆಚ್ಚಿದ್ದರು.
ಕೊಪ್ಪಳದ ಸಣಾಪುರ ಬಳಿ ಪ್ರವಾಸಿಯೊಬ್ಬರ ಕೊಲೆ, ವಿದೇಶಿ ಮಹಿಳೆ ಸಹಿತ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣದಿಂದ ವಿದೇಶಿಗರು ಸೇರಿ ಈ ಬಾರಿ ಹಂಪಿಯಲ್ಲಿ ನಡೆಯುವ ಹೋಳಿ ಉತ್ಸವದಲ್ಲಿ ವಿದೇಶಿಯರು ಹೋಳಿ ಆಚರಣೆಗೆ ಬರದೆ ಇರಬಹುದು ಎಂಬ ಆತಂಕ ಇತ್ತು. ಆದರೆ, ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ಭಾರಿ ದೇಶ ವಿದೇಶಗಳ ಪ್ರವಾಸಿಗರು ಹೆಚ್ಚಿದ್ದರು.
ಬೇರೆ ಬೇರೆ ರಾಜ್ಯಗಳಲ್ಲದೇ ಇಂಗ್ಲೆಂಡ್, ಜರ್ಮನಿ, ಇಟಲಿ, ಅಮೆರಿಕ, ಇಸ್ರೇಲ್, ರಷ್ಯಾ, ಜಪಾನ್, ಸ್ವೀಜರ್‌ಲ್ಯಾಂಡ್, ಕೆನಡಾ, ನ್ಯೂಜಿಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ್ದ ವಿದೇಶಿ ಪ್ರವಾಸಿಗರು ಹಂಪಿಯ ರಥಬೀದಿಯಲ್ಲಿ ಹೋಳಿಹಬ್ಬದ ರಂಗಿನಾಟದಲ್ಲಿ ಭಾಗಿಯಾದರು. ಬಳಿಕ ತುಂಗಭದ್ರಾ ನದಿಗೆ ತೆರಳಿ ಸ್ನಾನ ಮಾಡಿದರು.