ಭರದಿಂದ ಸಾಗಿದೆ ವೇದಿಕೆಗಳ ನಿರ್ಮಾಣ

22 MANJU 03
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಇನ್ನೂ ಐದು ದಿನ ಬಾಕಿ ಇದ್ದು, ಆರು ವೇದಿಕೆಗಳ ನಿರ್ಮಾಣ ಕಾರ್ಯ ಸೇರಿ ಇತರೆ ಸಿದ್ದತೆ ಶರವೇಗದಲ್ಲಿ ಸಾಗಿದೆ. ಇನ್ನೂ ಮೂರು ದಿನಗಳಲ್ಲಿ ಹಂಪಿ ಮದುವಣಗಿತ್ತಿಯಂತೆ ಕಾಣಲಿದೆ.

ಹಂಪಿ ಉತ್ಸವ ಫೆ.28 ಮತ್ತು ಮಾ.01 ಮತ್ತು 02ರಂದು ನಡೆಯಲಿದ್ದು, ಉತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ವಿಜಯನಗರ ಜಿಲ್ಲಾಡಳಿತ ಈಗಾಗಲೇ ಬೆಂಗಳೂರಿನ ಉಡುಪಾಸ್ ಎಂಟರ್‌ಪ್ರೈಸಸ್ ಸಂಸ್ಥೆಗೆ ವೇದಿಕೆ ನಿರ್ಮಾಣ ಕಾರ್ಯದ ಹೊಣೆ ವಹಿಸಿದೆ. ಹಂಪಿಯ ಪ್ರಕಾಶ್‌ನಗರದ ಗಾಯತ್ರಿಪೀಠದ ಬಯಲು ಜಾಗದಲ್ಲಿ ಪ್ರಧಾನ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಹಂಪಿಯ ವಿವಿಧ ಸ್ಮಾರಕಗಳನ್ನು ಒಳಗೊಂಡ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಮೂರು ದಿನಗಳಲ್ಲಿ ವೇದಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಫೆ.28 ಉತ್ಸವ ಉದ್ಘಾಟನೆಗೆ ಸಿದ್ಧತೆ ಶರವೇಗ ಪಡೆದಿದೆ.

ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹಂಪಿಯಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿತ್ತು. ಅಲ್ಲದೇ ಮೂಲ ಸೌಲಭ್ಯ ಇಲ್ಲದೆ ಪ್ರವಾಸಿಗರು ನಿತ್ಯವೂ ಪರದಾಡುವಂತಹ ಸ್ಥಿತಿ ಹಂಪಿಯಲ್ಲಿ ನಿರ್ಮಾಣವಾಗಿತ್ತು. ಹಂಪಿ ಉತ್ಸವದ ನೆಪದಲ್ಲಿಯಾದರೂ ಜಿಲ್ಲಾಡಳಿತ ಸ್ವಚ್ಛತಾ ಕಾರ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದೆ. ಉತ್ಸವ ನಡೆಯುವ ವೇದಿಕೆಗಳ ಮುಂದೆ ಹಾಗೂ ದಾರಿಯಲ್ಲಿ ಬೆಳೆದಿರುವ ಮುಳ್ಳುಗಿಡಗಳನ್ನು ಕಡಿದು ಹಾಕಲಾಗಿದೆ. ರಸ್ತೆ ಬದಿಯಲ್ಲಿ ಅಥವಾ ಸ್ಮಾರಕಗಳ ಮುಂದೆ ಬಿದ್ದಿರುವ ತಗ್ಗು- ಗುಂಡಿಗಳನ್ನು ಮುಚ್ಚುವ ಕಾರ್ಯ ಕೂಡ ನಡೆದಿದೆ. ನಗರದಿಂದ ಹಂಪಿಗೆ ಸಂಪರ್ಕಿಸುವ ರಸ್ತೆಯ ಎರಡು ಬದಿಯಲ್ಲಿ ಬೆಳೆದು ನಿಂತಿರುವ ಮುಳ್ಳುಗಿಡಗಳನ್ನು ಕಡಿದು ಸ್ವಚ್ಛಗೊಳಿಸುತ್ತಿದೆ. ಉತ್ಸವಕ್ಕೆ ಅಗತ್ಯವಾಗಿರುವ ವಿದ್ಯುತ್ ಸೌಲಭ್ಯ ಕಲ್ಪಿಸಲು ಜೆಸ್ಕಾಂನವರು ಹಂಪಿಯಲ್ಲಿ ನಿರ್ಮಾಣವಾಗುತ್ತಿರುವ 06 ವೇದಿಕೆಗಗಳು ಸೇರಿದಂತೆ ರಸ್ತೆ, ಸ್ಮಾಕರಗಳ ಮೇಲೆ ವಿದ್ಯುತ್ ಅಲಂಕಾರ ಮಾಡಲು ಮೂರು ದಿನದ ವಿದ್ಯುತ್ ಪೂರೈಸಲು ಕಾಮಗಾರಿ ನಡೆಯುತ್ತಿದೆ.

1300 ಕೆವಿ ವಿದ್ಯುತ್ ಪುರೈಕೆ

ಹಂಪಿ ಉತ್ಸವದ ನಿಮಿತ್ತ ಮೂರು ದಿನಗಳ ಕಾಲ 1300 ಕಿಲೋ ವ್ಯಾಟ್ ತಾತ್ಕಾಲಿಕ ವಿದ್ಯುತ್ ಸಂರ್ಪಕ ನೀಡಲು ಜಿಲ್ಲಾಡಳಿತ ಜೆಸ್ಕಾಂಗೆ ಸೂಚನೆ ನೀಡಿದೆ. 21 ಲಕ್ಷ ರೂ. ವೆಚ್ಚದಲ್ಲಿ 20 ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಮೂರು ಜಿಒಎಸ್ ಅಳವಡಿಕೆ. ಇದರೊಂದಿಗೆ 250 ಕೆವಿಯ 5 ಟಿಸಿಗಳು. 100 ಕೆವಿಯ 18 ಟಿಸಿಗಳು, 63 ಕೆವಿಯ 7 ಟಿಸಿಗಳನ್ನು ಒಟ್ಟು 30 ಟಿಸಿಗಳನ್ನು ಅಳವಡಿಕೆ ಮಾಡಲಾಗಿದೆ. ಫೆ.27 ಒಮ್ಮೆ ಪ್ರತ್ಯೇಕ್ಷಿಕವಾಗಿ ಪರೀಕ್ಷೆ ಮಾಡಲಾಗುತ್ತದೆ. ನಗರದಿಂದ ಮಲಪನಗುಡಿ, ಕಮಲಾಪುರ, ಕಟ್ಟಿರಾಂಪುರ ಮಾರ್ಗವಾಗಿ ರಸ್ತೆಗಳಿಗೆ ವಿದ್ಯುತ್ ಅಲಂಕಾರಗಳಿಗೆ ಮೂರು ದಿನದ ಉತ್ಸವದಲ್ಲಿ ವಿದ್ಯುತ್ ಸೌಲಭ್ಯ ದೊರೆಯಲಿದೆ.

ಹಂಪಿಯಲ್ಲಿ ನಡೆಯುವ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರ ಕಲಾವಿದರು ಭಾಗವಹಿಸಲಿದ್ದಾರೆ. ಒಟ್ಟು 06 ವೇದಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹಂಪಿ ಮಹಾನವಮಿ ದಿಬ್ಬದ ಬಳಿ ಮೊದಲ ಬಾರಿ ವೇದಿಕೆ ಹಾಕಲಾಗಿದೆ. ಗತ ವೈಭವ ಸಾರುವ ಉತ್ಸವ ಜನರಲ್ಲಿ ಕುತೂಹಲವನ್ನುಂಟುಮಾಡಲಿದೆ. - ಜಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ, ವಿಜಯನಗರ ಹಂಪಿ ಉತ್ಸವ ಸಿದ್ಧತೆ ಭರದಿಂದ ಆರಂಭವಾಗಿದೆ. ಹಂಪಿಯಲ್ಲಿ ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ರಸ್ತೆಗಳ ಅಭಿವೃದ್ಧಿ ಹಾಗೂ ಉತ್ಸವಕ್ಕೆ ಬರುವ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗದAತೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಂಪಿ ಉತ್ಸವವನ್ನು ಜನೋತ್ಸವವಾಗಿ ಆಚರಿಸಲು ಸಕಲ ಸಿದ್ಧತೆಯನ್ನು ರೂಪಿಸಲಾಗುತ್ತಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net