

ಬೆಂಗಳೂರು: ಸಾಂಸ್ಕೃತಿಕ ಅಕಾಡೆಮಿಗಳಿಗೆ ಆರ್ಥಿಕ ಬೆಂಬಲವಿಲ್ಲದಿದ್ದರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಸರ್ಕಾರವು ಸಾಂಸ್ಕೃತಿಕ ಅಕಾಡೆಮಿಗಳಿಗೆ ಸಮರ್ಪಕ ಅನುದಾನ ನೀಡಬೇಕು ಎಂದು ಸಾಹಿತಿ ಹಂಪ ನಾಗರಾಜಯ್ಯ ಒತ್ತಾಯಿಸಿದ್ದಾರೆ.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಮ್ಮಿಕೊಂಡಿದ್ದ ‘ಕಳತಾವೊರ್ ಮಳಾವ್’ (ಸಜ್ಜನರ ಸಲ್ಲಾಪ) ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಂದೆ ಕೆರೆಗಳು ಬತ್ತಿ ಹೋಗಿದ್ದರೂ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಈಗ ಆರ್ಥಿಕ ಸ್ಥಿತಿ ಬತ್ತಿ ಹೋಗಿದ್ದು, ಕೆರೆ-ನದಿಗಳು ತುಂಬಿ ಹರಿಯುತ್ತಿವೆ. ವಾರ್ಷಿಕ 30 ಲಕ್ಷ ಅನುದಾನದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅರ್ಧದಷ್ಟು ಹಣ ಸಿಬ್ಬಂದಿ ವೆಚ್ಚಕ್ಕೆ ಹೋಗಲಿದೆ. ಹೊಸದಾಗಿ ಕಾರ್ಯಕಾರಿ ಸಮಿತಿ ನೇಮಕಗೊಂಡ ಬಳಿಕ ಎಲ್ಲಾ ಅಕಾಡೆಮಿಗಳಿಗೆ 5 ಕೋಟಿ ಅನುದಾನ ಒದಗಿಸಬೇಕು. ಈ ಬಗ್ಗೆ ಎಲ್ಲಾ ಅಕಾಡೆಮಿಗಳ ಅಧ್ಯಕ್ಷರನ್ನು ಒಳಗೊಂಡ ನಿಯೋಗವು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಬಂಜಾ ಭಾಷಿಕರು ಪ್ರಪಂಚದಾದ್ಯಂತ ಇದ್ದಾರೆ. ಪ್ರಾದೇಶಿಕ, ಸಾಂಸ್ಕೃತಿಕ ಲಕ್ಷಣವನ್ನು ಮೈಗೂಡಿಸಿಕೊಂಡಿರುವ ಬಂಜಾರರಿಗೆ ಸಂಬಂಧಿಸಿದಂತೆ ವಸ್ತು ಸಂಗ್ರಹಾಲಯ ನಿರ್ಮಿಸಬೇಕು. ಬಂಜಾರ ಇತಿಹಾಸ ರೊಮಾಂಚನಕಾರಿಯಾಗಿದೆ ಎಂದು ಹಂಪನಾ ವಿವರಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ರವೀಂದ್ರ ಭಟ್ಟ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್ ಗೋವಿಂದಸ್ವಾಮಿ, ರಿಜಿಸ್ಟ್ರಾರ್ ಬಿ.ನಿಲಮ್ಮ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷ ಎನ್.ಆರ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.