ಹಮಾಸ್ ಮುಖ್ಯಸ್ಥ ರಾವ್ಹಿ ಬಲಿ; ಇಸ್ರೇಲ್ ದಾಳಿಗೆ ಇನ್ನಿಬ್ಬರು ಪ್ರಮುಖರ ಸಾವು

isrel attack amas
Published on

ಜೆರುಸಲೇಂ: ಹಮಾಸ್ ಸರ್ಕಾರದ ಮುಖ್ಯಸ್ಥ ಹಾಗೂ ಇನ್ನಿಬ್ಬರು ಪ್ರಮುಖರನ್ನು ಹೊಡೆದುರುಳಿಸಿದ್ದಾಗಿ ಮಧ್ಯಪ್ರಾಚ್ಯದಲ್ಲಿನ ಯುದ್ಧೋನ್ಮಾದದ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಇಸ್ರೇಲ್ ಘೋಷಿಸಿದೆ.

ಗಾಜಾ ಪಟ್ಟಿಯಲ್ಲಿನ ಹಮಾಸ್ ಸರ್ಕಾರದ ಮುಖ್ಯಸ್ಥ ರಾವ್ಹಿ ಮುಸ್ತಾಹ, ಹಮಾಸ್ ಪೊಲಿಟಿಕಲ್ ಬ್ಯೂರೋ ಹಾಗೂ ಹಮಾಸ್ ಕಾರ್ವಿುಕ ಸಮಿತಿಯಲ್ಲಿ ಭದ್ರತಾ ಖಾತೆ ಹೊಂದಿದ್ದ ಸಮೇಹ್ ಅಲ್ ಸಿರಾಜ್ ಮತ್ತು ಹಮಾಸ್ ಜನರಲ್ ಸೆಕ್ಯುರಿಟಿ ಮೆಕ್ಯಾನಿಸಂ ಕಮಾಂಡರ್ ಸಮಿ ಔದೆಹ್ ಅವರನ್ನು ಮೂರು ತಿಂಗಳ ಹಿಂದಿನ ವಾಯುದಾಳಿಯಲ್ಲಿ ಹತ್ಯೆ ಮಾಡಿದ್ದಾಗಿ ಜಂಟಿ ಕಾರ್ಯಾಚರಣೆ ನಡೆಸಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮತ್ತು ಇಸ್ರೇಲ್ ಭದ್ರತೆಗಳ ಪ್ರಾಧಿಕಾರ (ಐಎಸ್​ಎ) ಘೋಷಿಸಿವೆ. ಇಸ್ರೇಲ್ ಇರಾನ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ನಡುವೆಯೇ ಈ ಕುರಿತ ಪ್ರಕಟಣೆ ಹೊರಡಿಸಲಾಗಿದೆ.

ಉತ್ತರ ಗಾಜಾ ಪಟ್ಟಿಯ ಭದ್ರ ಹಾಗೂ ಸುಸಜ್ಜಿತ ಭೂಗತ ಕಾಂಪೌಂಡ್​ನಲ್ಲಿ ಅಡಗಿಕೊಂಡಿದ್ದ ಈ ಉಗ್ರರನ್ನು ಐಡಿಎಫ್ ಮತ್ತು ಐಎಸ್​ಎ ಗುಪ್ತಚರ ಆಧಾರಿತ ನಿಖರ ದಾಳಿಯಲ್ಲಿ ಐಎಎಫ್ ಫೈಟರ್ ಜೆಟ್​ಗಳು ಹೊಡೆದು ಸಾಯಿಸಿವೆ. ಹಮಾಸ್ ಉಗ್ರರು 2023ರ ಅ.7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ ಇರಾನ್ ಬೆಂಬಲಿತ ಗುಂಪುಗಳಾದ ಗಾಜಾದ ಹಮಾಸ್ ಹಾಗೂ ಲೆಬನಾನ್​ನ ಹಿಜ್ಬುಲ್ಲಾ ನಾಯಕರನ್ನು ಇಸ್ರೇಲ್ ಸೇನೆ ಗುರಿಯಾಗಿಸಿಕೊಂಡಿದೆ.

ಅಡಗುದಾಣದಲ್ಲೇ ಸಾವು

ಅಡಗುದಾಣವಾದ ಈ ಕಾಂಪೌಂಡ್ ಮುಸ್ತಾಹ ನೇತೃತ್ವದ ಹಮಾಸ್ ನಾಯಕರಿಂದ ನಿರ್ವಹಣೆ ಆಗುತ್ತಿತ್ತು. ಇದು ಹಮಾಸ್ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್ ಆಗಿ ಬಳಕೆ ಆಗುತ್ತಿದ್ದು, ಹಿರಿಯ ನಾಯಕರಿಗೆ ದೀರ್ಘಾವಧಿಗೆ ವಾಸವಿರುವ ವ್ಯವಸ್ಥೆಯನ್ನೂ ಹೊಂದಿತ್ತು. ಈ ಅಡಗುದಾಣ ಹಾಗೂ ಅದರಲ್ಲಿದ್ದ ಉಗ್ರರನ್ನು ಹೊಡೆದು ಸಾಯಿಸಲಾಗಿದ್ದರೂ ತಮ್ಮ ಭಯೋತ್ಪಾದಕ ಚಟುವಟಿಕೆಯ ನೈತಿಕತೆ ಹಾಗೂ ಕಾರ್ಯನಿರ್ವಹಣೆಯ ನಷ್ಟ ತಪ್ಪಿಸಲು ಅವರ ಸಾವನ್ನು ಹಮಾಸ್ ಘೋಷಿಸಿರಲಿಲ್ಲ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಕಳೆದ ವರ್ಷ ಅ.7ರಂದು ಇಸ್ರೇಲ್ ಮೇಲೆ ನಡೆದ ಹಮಾಸ್ ದಾಳಿಯಲ್ಲಿ 1,205 ಮಂದಿ ಸಾವಿಗೀಡಾಗಿದ್ದು, ಆ ಪೈಕಿ ಹಲವರು ನಾಗರಿಕರು. ಮತ್ತೊಂದೆಡೆ ಪ್ರತೀಕಾರಕ್ಕಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಗಾಜಾದಲ್ಲಿ ಕನಿಷ್ಠ 41,788 ಮಂದಿ ಸಾವಿಗೀಡಾಗಿದ್ದು, ಆ ಪೈಕಿ ಹಲವರು ನಾಗರಿಕರು.

ಯಾರೀತ ರಾವ್ಹಿ ಮುಸ್ತಾಹ?

ರಾವ್ಹಿ ಮುಸ್ತಾಹ ಹಮಾಸ್​ನ ಅತ್ಯಂತ ಹಿರಿಯ ಉಗ್ರರಲ್ಲಿ ಒಬ್ಬನಾಗಿದ್ದು, ಹಮಾಸ್ ಪಡೆಯ ನಿಯೋಜನೆಯನ್ನು ನಿರ್ಧರಿಸುವಲ್ಲಿ ಪ್ರಭಾವಿ ಕೂಡ ಆಗಿದ್ದ. ಸೇನಾ ನಿರ್ಧಾರಗಳಲ್ಲೂ ರಾವ್ಹಿ ಭಾಗಿ ಆಗಿರುತ್ತಿದ್ದುದಲ್ಲದೆ, ಗಾಜಾ ಪಟ್ಟಿಯಲ್ಲಿ ಹಮಾಸ್ ಸಿವಿಲ್ ಗವರ್ನೆನ್ಸ್​ನ ಮುಖ್ಯಸ್ಥನಾಗಿ ಕೈದಿಗಳ ವ್ಯವಹಾರಗಳ ಖಾತೆಯನ್ನೂ ಹೊಂದಿದ್ದ. ಅದಕ್ಕೂ ಮುನ್ನ ಹಣಕಾಸು ಖಾತೆಯನ್ನೂ ನಿರ್ವಹಿಸಿದ್ದ. ರಾವ್ಹಿ ತನ್ನ ಬಲಗೈ ಭಂಟ ಯಾಹ್ಯಾ ಸಿನ್ವಾರ್ ಜೊತೆಗೂಡಿ ಹಮಾಸ್ ಜನರಲ್ ಸೆಕ್ಯುರಿಟಿ ಮೆಕ್ಯಾನಿಸಂ ಸ್ಥಾಪಿಸಿದ್ದ. ಹಮಾಸ್ ಪೊಲಿಟಿಕಲ್ ಬ್ಯೂರೋದಲ್ಲಿ ಅತ್ಯಂತ ಹಿರಿಯನಾಗಿದ್ದ ರಾವ್ಹಿ, ಯುದ್ಧ ಸಂದರ್ಭ ನಾಗರಿಕ ನಿಯಂತ್ರಣ ಸಾಧಿಸಿದ್ದಲ್ಲದೆ ಇಸ್ರೇಲ್ ವಿರುದ್ಧ ಭಯೋತ್ಪಾದಕ ಚಟುವಟಿಕೆಯಲ್ಲೂ ತೊಡಗಿದ್ದ.

ಕದನವಿರಾಮಕ್ಕೆ ಒಪ್ಪಿದ್ದ ಹಿಜ್ಬುಲ್ಲಾ ನಾಯಕ ನಸ್ರಲ್ಲಾ?

ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಬೈರುತ್​ನಲ್ಲಿ ಕಳೆದ ವಾರ ನಡೆದ ಇಸ್ರೇಲ್ ವಾಯುದಾಳಿಯಲ್ಲಿ ಸಾವಿಗೀಡಾಗುವುದಕ್ಕೂ ಕೆಲಕಾಲ ಮುನ್ನ ಇಸ್ರೇಲ್ ಜತೆ ಕದನವಿರಾಮ ಕೈಗೊಳ್ಳಲು ಒಪ್ಪಿದ್ದ ಎಂಬುದಾಗಿ ಲೆಬನಾನ್ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬಿಬ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ವಿಶ್ವಸಂಸ್ಥೆ ಹಾಗೂ ಫ್ರೆಂಚ್ ಪ್ರತಿನಿಧಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿತ್ತು ಎಂದಿದ್ದಾರೆ. ಅಲ್ಲದೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಕದನವಿರಾಮಕ್ಕೆ ಒಪ್ಪಿದ್ದರು ಎಂದೂ ಅವರು ತಿಳಿಸಿದ್ದಾರೆ. ಇಸ್ರೇಲ್ ದಾಳಿಯಲ್ಲಿ ಹತನಾಗಿರುವ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅಂತಿಮ ಸಂಸ್ಕಾರ ಶುಕ್ರವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ನಸ್ರಲ್ಲಾ ಸಾವಿನ ಕುರಿತು ಕಳೆದ ಶನಿವಾರ ಹಿಜ್ಬುಲ್ಲಾ ಖಚಿತಪಡಿಸಿದ್ದರೂ ಹೇಗೆ ಸಾವು ಸಂಭವಿಸಿತ್ತು ಎಂದು ತಿಳಿಸಿರಲಿಲ್ಲ. ದಾಳಿ ವೇಳೆ ನಸ್ರಲ್ಲಾ ದಕ್ಷಿಣ ಉಪನಗರದ ದಹಿಯೆಹ್​ನಲ್ಲಿನ ಬಂಕ್​ನಲ್ಲಿದ್ದರು. ಅವರ ದೇಹದ ಮೇಲೆ ನೇರ ಗಾಯ ಆಗಿರದಿದ್ದರೂ ಸ್ಪೋಟದ ಆಘಾತಕ್ಕೆ ಸತ್ತಿರಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸಲಹೆಗಾರ ಹತ

ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾರ್ಪ್ಸ್​ನ ಹಿರಿಯ ಸೇನಾ ಸಲಹೆಗಾರ ಮಜಿದ್ ದಿವಾನಿ ಎಂಬಾತ ಮೂರು ದಿನಗಳ ಹಿಂದೆ ಡಮಾಸ್ಕಸ್​ನಲ್ಲಿ ನಡೆದ ಇಸ್ರೇಲ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸಾವಿಗೀಡಾದ ಎಂಬುದಾಗಿ ಇರಾನ್ ಮಾಧ್ಯಮವೊಂದು ವರದಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net