ಅರ್ಧ ರಾಜ್ಯ ಮತ್ತೆ ಸ್ತಬ್ಧ? ಬೆಂಗಳೂರು ಜತೆ 10ಕ್ಕೂ ಹೆಚ್ಚು ಜಿಲ್ಲೆ ಲಾಕ್​ಡೌನ್ ಸಾಧ್ಯತೆ

lockdown new
Published on

ಬೆಂಗಳೂರು: ಎಲ್ಲ ನಿರೀಕ್ಷೆ, ಲೆಕ್ಕಾಚಾರಗಳನ್ನು ಮೀರಿ ಜನಸಮುದಾಯದಲ್ಲಿ ವ್ಯಾಪಿಸುವ ಮೂಲಕ ಕರ್ನಾಟಕವನ್ನು ಸಂಕಷ್ಟಕ್ಕೆ ದೂಡಿರುವ ಕರೊನಾ ವೈರಸ್ ಕಟ್ಟಿಹಾಕಲು ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾದ ತುರ್ತು ಎದುರಾಗಿದೆ. ಹೀಗಾಗಿ ಈಗಾಗಲೇ ಬೆಂಗಳೂರಿನಲ್ಲಿ ಘೋಷಿಸಲಾಗಿರುವ ವಾರಾವಧಿ ಲಾಕ್​ಡೌನ್ ನಿರ್ಬಂಧವನ್ನು ಅಪಾಯದ ಅಂಚಿನಲ್ಲಿರುವ ಇನ್ನಷ್ಟು ಜಿಲ್ಲೆಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಸೋಮವಾರ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮತ್ತೆ ಲಾಕ್​ಡೌನ್ ಜಾರಿಗೆ ಜನಪ್ರತಿನಿಧಿಗಳು ಒತ್ತಡ ಹೇರಿದ್ದಾರೆ. ಇದಕ್ಕೆ ಸರ್ಕಾರ ಸಮ್ಮತಿಸಿದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಜೊತೆಗೆ ಅರ್ಧ ರಾಜ್ಯ ಮತ್ತೆ ಲಾಕ್​ಡೌನ್​ಗೆ ಒಳಪಡಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಜಲ್ಲಾ ಪಂಚಾಯಿತಿ ಸಿಇಒ, ಎಸ್ಪಿಗಳ ಅಭಿಪ್ರಾಯ ಪಡೆದು, ಮುಖ್ಯ ಕಾರ್ಯದರ್ಶಿ ಜತೆ ವಿಚಾರ ವಿನಿಮಯ ಮಾಡಿ ಮುಂದುವರಿಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಚಿಸಿದ್ದಾರೆ. ಇದೇ ಕಾರ್ಯಸೂಚಿಯನ್ನು ಇಟ್ಟುಕೊಂಡು ಡಿಸಿ, ಸಿಇಒ, ಎಸ್ಪಿಗಳೊಂದಿಗೆ ಬಿಎಸ್​ವೈ ಸೋಮವಾರ 2 ಹಂತದಲ್ಲಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11ಕ್ಕೆ ಹೆಚ್ಚು ಸೋಂಕುಬಾಧಿತ ಜಿಲ್ಲೆಗಳು, ಸಂಜೆ 4ಕ್ಕೆ ಉಳಿದ ಜಿಲ್ಲೆಗಳೊಂದಿಗೆ ವಿಡಿಯೋ ಸಂವಾದ ಗೊತ್ತುಪಡಿಸಲಾಗಿದೆ.

ಮಾರ್ಗಸೂಚಿ ಫೈನಲ್: ಸಿಎಂ ತಮ್ಮ ಕಾವೇರಿ ನಿವಾಸದಲ್ಲಿ ಭಾನುವಾರ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಕರೊನಾ ಕಟ್ಟಿಹಾಕುವುದಕ್ಕೆ 2 ವಿಭಿನ್ನ ಕಾರ್ಯತಂತ್ರಗಳು ಹಾಗೂ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗಿದೆ. ವಿಡಿಯೋ ಸಂವಾದದಲ್ಲಿ ಸಂಗ್ರಹಿಸಿದ ಅಭಿಪ್ರಾಯ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ಸ್ಪರ್ಶ ನೀಡಿ ಸೋಮವಾರ ಬಿಡುಗಡೆ ಮಾಡಲಿದ್ದಾರೆ.

ಯಾವೆಲ್ಲ ಜಿಲ್ಲೆ ದಿಗ್ಬಂಧನ?: ಲಾಕ್​ಡೌನ್ ಪರ ಒಲವು ವ್ಯಕ್ತವಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಲಾಕ್ ಡೌನ್ ವಿಸ್ತರಣೆಗೊಳ್ಳಲಿದೆ. ಕಡಿಮೆ ಪ್ರಕರಣಗಳಿರುವ ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಗಳಿವೆ.

ಸಂಭಾವ್ಯ ಮಾರ್ಗಸೂಚಿ

  •  ಲಾಕ್​ಡೌನ್ ಜಾರಿಯಾದ ಜಿಲ್ಲೆಗಳಲ್ಲಿ ಅಂತಾರಾಜ್ಯ, ಅಂತರ ಜಿಲ್ಲೆ ಸಂಚಾರ ಸ್ತಬ್ಧ
  • ಆರೋಗ್ಯ ಕಾರಣ ಬಿಟ್ಟು ಜನರ ಅನಗತ್ಯ ಓಡಾಟಕ್ಕೆ ಪೂರ್ಣ ನಿರ್ಬಂಧ, ಕೃಷಿ, ತೋಟಗಾರಿಕೆ ಚಟುವಟಿಕೆಗಳು, ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ಅವಕಾಶ
  • ಉದ್ಯಮ-ವಹಿವಾಟು, ವಾಣಿಜ್ಯ ಚಟುವಟಿಕೆ ಸಭೆ-ಸಮಾರಂಭಗಳಿಗೆ ಪೂರ್ಣ ನಿಷೇಧ
  •  ಉದ್ಯಾನವನಗಳು, ಹೋಟೆಲ್, ದೇವಸ್ಥಾನ
  • ದರ್ಶನ ಬಂದ್, ದಿನಪತ್ರಿಕೆ ಪೂರೈಕೆ ಅಬಾಧಿತ. ಹಾಲು, ದಿನಸಿ ಪದಾರ್ಥಗಳು ಸೇರಿದಂತೆ
  • ಅಗತ್ಯ ವಸ್ತುಗಳಿಗೆ ವಿನಾಯಿತಿ
  •  ವೈದ್ಯಕೀಯ ಸೇವೆಗಳಿಗೆ ಅವಕಾಶ, ಔಷಧ ಅಂಗಡಿಗಳನ್ನು ತೆರೆದಿಡುವುದು ಕಡ್ಡಾಯ
  • ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳು, ಪಿಪಿಇ ಕಿಟ್ ತಯಾರಿಸುವ ಕಾರ್ಖಾನೆಗಳಿಗೂ ಅವಕಾಶ
  • ಅಂತಾರಾಜ್ಯ ಸರಕು ಸಾಗಣೆಗೆ ನಿರ್ಬಂಧದಿಂದ ವಿನಾಯಿತಿ, ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ
  • ಚೆಕ್​ಪೋಸ್ಟ್​ಗಳ ಸ್ಥಾಪನೆ, ತೀವ್ರ ನಿಗಾ

ಲಾಕ್ ಆಗದ ಕಡೆ ಏನು?:

  • ಈಗಾಗಲೇ ಜಾರಿಯಲ್ಲಿರುವ ನಿಯಮಗಳ ಮುಂದುವರಿಕೆ
  • ರಾತ್ರಿ 8 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿ
  • ಅನುಮತಿ ನೀಡಿದ ಉದ್ಯಮ-ವ್ಯವಹಾರ, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ
  • ಅಂತರ ಜಿಲ್ಲಾ ಓಡಾಟಕ್ಕೆ ಅವಕಾಶ ಇರದು
  • ಎಲ್ಲರೂ ನಿಯಮಗಳನ್ನು ಪಾಲಿಸಿ.

ರಾಜ್ಯದಲ್ಲಿ ಈಗ ದಿನವೊಂದಕ್ಕೆ 2000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಮುಂದಿನ 15 ರಿಂದ 30 ದಿನಗಳಲ್ಲಿ ಇದು ದ್ವಿಗುಣವಾಗಬಹುದು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಮಗೆ ಅತಿ ದೊಡ್ಡ ಸವಾಲು ಎದುರಾಗಲಿದೆ. | ಶ್ರೀರಾಮುಲು ಆರೋಗ್ಯ ಸಚಿವ https://www.vijayavani.net/clinical-trial-of-covaxin-starts-from-monday-no-covid-19-vaccine-possible-before-2021/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net