ಹಲಗೇರಿ ವೃತ್ತಕ್ಕೆ ಬೇಕು ಬಸ್​ ನಿಲ್ದಾಣ; ಮಳೆ, ಬಿಸಿಲಲ್ಲೂ ಪ್ರಯಾಣಿಕರ ಪರದಾಟ

27-RNR-01
Published on

ರಾಣೆಬೆನ್ನೂರ: ವಾಣಿಜ್ಯ ನಗರಿ ರಾಣೆಬೆನ್ನೂರ ಹಾವೇರಿ ಜಿಲ್ಲೆಯಲ್ಲಿಯೆ ಅತಿವೇವಾಗಿ ಬೆಳೆಯುತ್ತಿರುವ ನಗರವಾಗಿದೆ. ಆದರೆ, ನಗರದಲ್ಲಿ ಮುಖ್ಯ ಬಸ್​ ನಿಲ್ದಾಣ ಹೊರತು ಪಡಿಸಿ ಒಂದೇ ಒಂದು ಇತರೆಡೆ ತೆರಳುವ ಪ್ರಯಾಣಿಕರಿಗೆ ನಿಂತುಕೊಳ್ಳಲು ಬಸ್​ ನಿಲ್ದಾಣ ಇಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ನಗರದಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣವಿಲ್ಲದಿರುವುದರಿಂದ ಪ್ರಯಾಣಿಕರು ನಿತ್ಯ ಪರದಾಡುವುದು ಸಾಮಾನ್ಯವಾಗಿದೆ. ನಿತ್ಯ ಪ್ರಯಾಣ ಮಾಡುವ ಸಾವಿರಾರು ಪ್ರಯಾಣಿಕರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಇಲ್ಲದಂತಾಗಿದೆ. ರಸ್ತೆಯ ಪಕ್ಕದಲ್ಲಿ ನಿಂತೇ ಬಸ್​ಗಾಗಿ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.

ಹಲಗೇರಿ ವೃತ್ತದಿಂದ ಶಿವಮೊಗ್ಗ, ಶಿಕಾರಿಪುರ, ಹಿರೇಕೆರೂರ, ರಟ್ಟಿಹಳ್ಳಿ, ತುಮ್ಮಿನಕಟ್ಟಿ, ಸುಕ್ಷೇತ್ರ ಉಕ್ಕಡಗಾತ್ರಿ, ಹೊನ್ನಾಳಿ, ಹಲಗೇರಿ ಸೇರಿ ನೂರಾರು ಗ್ರಾಮ, ತಾಲೂಕು, ಜಿಲ್ಲೆಗಳಿಗೆ ಬಸ್​ಗಳು ತೆರಳುತ್ತವೆ. ಈ ಮಾರ್ಗವಾಗಿ ಸಂಚರಿಸುವ ಬಸ್​ಗಳಿಗೆ ಮುಖ್ಯ ಬಸ್​ ನಿಲ್ದಾಣಕ್ಕಿಂತಲೂ ಅತಿಹೆಚ್ಚು ಪ್ರಯಾಣಿಕರು ಹತ್ತುವುದು ಹಲಗೇರಿ ವೃತ್ತದಿಂದಲೇ ಎಂಬುದು ಗಮನಾರ್ಹ ಸಂಗತಿಯಾಗಿದೆ.

ವಿದ್ಯಾಥಿರ್ಗಳ ಪಾಡು ಹೇಳತೀರದು...

ಹಲಗೇರಿ ವೃತ್ತದಲ್ಲಿ ಪ್ರಯಾಣಿಕರಿಗೆ ಯಾವುದೇ ಭದ್ರತೆ ಇಲ್ಲ. ದಿನದ 24 ಗಂಟೆಗಳು ಬಸ್​ಗಳು ಸಂಚರಿಸುತ್ತವೆ. ರಾತ್ರಿ ಹೊತ್ತು ಕೊರೆಯುವ ಚಳಿಯಲ್ಲೂ ಬಸ್​ಗಾಗಿ ರಸ್ತೆಬದಿ ನಿಲ್ಲಬೇಕಿದೆ. ವಿದ್ಯಾಥಿರ್ಗಳ ಪಾಡು ಸಹ ಹೇಳ ತೀರದ್ದಾಗಿದ್ದು, ಬಸ್​ಗಳಲ್ಲಿ ಹತ್ತಲು, ಸೀಟು ಹಿಡಿಯಲು ಹರಸಾಹಸಪಡುವಂತಾಗಿದೆ. ಒಟ್ಟಾರೆ ಹಲಗೇರಿ ವೃತ್ತದಲ್ಲಿ ಬಸ್​ ನಿಲ್ದಾಣ ಆಗಲೇಬೇಕೆಂಬುದು ಸಾರ್ವಜನಿಕರ, ಪ್ರಯಾಣಿಕರ ಒತ್ತಾಯವಾಗಿದೆ.

ಇಲ್ಲಿಯೇ ಬಸ್​ ಹತ್ತುವುದೇಕೆ...?

ಹಲಗೇರಿ ವೃತ್ತ ನಗರದ ಮುಖ್ಯ ಬಸ್​ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿದೆ. ಆದರೆ, ಈ ವೃತ್ತದಿಂದ ಗ್ರಾಮೀಣ ಭಾಗದ ಜನರಿಗೆ ತರಕಾರಿ ಮಾರುಕಟ್ಟೆ, ನೆಹರು ಮಾರುಕಟ್ಟೆ, ಎಪಿಎಂಸಿ ತರಕಾರಿ ಮಾರುಕಟ್ಟೆ, ಕಾಳುಕಡಿ ಮಾರುಕಟ್ಟೆ, ಶಾಲಾ&ಕಾಲೇಜ್​ಗಳು ಹಾಗೂ ತಾಲೂಕು ಕ್ರೀಡಾಂಗಣ ಸೇರಿ ಪ್ರತಿಯೊಂದು ಸ್ಥಳಗಳು ಹತ್ತ್ತಿರವಾಗುತ್ತವೆ. ಹೀಗಾಗಿ ಬಹಳಷ್ಟು ಪ್ರಯಾಣಿಕರು ನಗರದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಹಲಗೇರಿ ವೃತ್ತಕ್ಕೆ ಬಂದು ಬಸ್​ ಹತ್ತುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net