300ನೇ ಧ್ರುವ್ ಹೆಲಿಕಾಪ್ಟರ್ ಹಾರಾಟಕ್ಕೆ ರೆಡಿ

HAL
Published on

ಬೆಂಗಳೂರು: ದೇಶದ ರಕ್ಷಣೆಗಾಗಿ ಸ್ವದೇಶಿ ತಂತ್ರಜ್ಞಾನದಲ್ಲಿ ಫೈಟರ್ ಜೆಟ್, ಹೆಲಿಕಾಪ್ಟರ್​ಗಳನ್ನು ಅಭಿವೃದ್ಧಿಪಡಿಸುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. (ಎಚ್​ಎಎಲ್) ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಬಳಸುವ ಧ್ರುವ್ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ (ಎಎಲ್​ಎಚ್) 300ನೇ ಹೆಲಿಕಾಪ್ಟರ್ ಅಭಿವೃದ್ಧಿಪಡಿಸಿದೆ.

ದೇಶದ ಹೆಮ್ಮೆಯ ಸಂಸ್ಥೆಯಾದ ಎಚ್​ಎಎಲ್​ನ ಸಾಧನೆಗೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ರಕ್ಷಣಾ ವಲಯದಲ್ಲಿ ಬಳಕೆಯಾಗುವ ಭಾರತೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಧ್ರುವ್ ಎಎಲ್​ಎಚ್ 300ನೇ ಹೆಲಿಕಾಪ್ಟರ್ ಸಿದ್ಧಪಡಿಸಲಾಗಿದೆ. ಆ ಹೆಲಿಕಾಪ್ಟರ್ ಅನ್ನು ಎಚ್​ಎಎಲ್ ಹೆಲಿಕಾಪ್ಟರ್ ಕಾಂಪ್ಲೆಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ಎಸ್. ಭಾಸ್ಕರ್ ಅವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು. ಧ್ರುವ್ ಹಲವು ವೈಶಿಷ್ಟ್ಯತೆಯನ್ನು ಹೊಂದಿದ್ದು, ಹಾರಾಟ ನಡೆಸುವಾಗಲೇ ಮಿಸೈಲ್​ಗಳನ್ನು ಹೊಡೆದುರುಳಿಸುವ ಇನ್ಪ್ರಾರೆಡ್ ಜಾಮರ್ ಅಳವಡಿಸಲಾಗಿದೆ.

ರಕ್ಷಣಾ ಇಲಾಖೆಯಲ್ಲಿ ಹೆಚ್ಚು ಬಳಕೆ: ಈವರೆಗೆ ಉತ್ಪಾದಿಸಲಾದ ಧ್ರುವ್ ಎಎಲ್​ಎಚ್ ಹೆಲಿಕಾಪ್ಟರ್​ಗಳನ್ನು ಅತಿಹೆಚ್ಚಾಗಿ ಭಾರತೀಯ ಭೂಸೇನೆ, ವಾಯು ಸೇನೆ ಮತ್ತು ಕರಾವಳಿ ಕಾವಲು ಪಡೆಯಲ್ಲಿ ಬಳಕೆ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚಿನ ಹೆಲಿಕಾಪ್ಟರ್​ಗಳು ದೇಶದ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ.

ವಿದೇಶಗಳಲ್ಲೂ ಧ್ರುವ್: ದೇಶವಷ್ಟೇ ಅಲ್ಲದೆ ವಿದೇಶಗಳಲ್ಲೂ ಧ್ರುವ್ ಎಎಲ್​ಎಚ್ ಅನ್ನು ಬಳಸಲಾಗುತ್ತಿದೆ. ಅದರಂತೆ ಮಾಲ್ಡೀವ್ಸ್, ಮಾರಿಷಸ್ ಮತ್ತು ನೇಪಾಳದ ಪೊಲೀಸರು ಧ್ರುವ್ ಹೆಲಿಕಾಪ್ಟರ್ ಅನ್ನು ಎಚ್​ಎಎಲ್ ಮೂಲಕ ಪಡೆದುಕೊಂಡಿದ್ದಾರೆ.

ಧ್ರುವ್ ಮೊದಲ ಹೆಲಿಕಾಪ್ಟರ್ ಸಿದ್ಧಪಡಿಸಿದಾಗಿನಿಂದ ಈವರೆಗೆ ಭಾರಿ ಬೇಡಿಕೆಯ ಎಎಲ್​ಎಚ್ ಆಗಿದೆ. ಮಾರ್ಕ್ 1ರಿಂದ ಮಾರ್ಕ್ 4ರವರೆಗೆ ಹಲವಾರು ಬದಲಾವಣೆ ಮಾಡಲಾಗಿದೆ. ಇದೀಗ 300ನೇ ಹೆಲಿಕಾಪ್ಟರ್ ಉತ್ಪಾದಿಸಲಾಗಿದ್ದು, ಆ ಬಗ್ಗೆ ಹೆಮ್ಮೆ ಎನಿಸುತ್ತದೆ. | ಆರ್. ಮಾಧವನ್ ಎಚ್​ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ

73 ಹೆಲಿಕಾಪ್ಟರ್ ನಿರ್ಮಾಣ

ರಕ್ಷಣಾ ಇಲಾಖೆಯನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ 41 ಧ್ರುವ್ ಹೆಲಿಕಾಪ್ಟರ್ ಅನ್ನು ಭೂಸೇನೆಗೆ ಪಡೆಯಲಾಗುತ್ತಿದೆ. ಅದರ ಜತೆಗೆ ವಾಯುಸೇನೆಗೆ 16 ಮತ್ತು ಕರಾವಳಿ ಕಾವಲು ಪಡೆಗೆ 16 ಹೆಲಿಕಾಪ್ಟರ್​ಗಳ ಬೇಡಿಕೆ ಸಲ್ಲಿಸಲಾಗಿದೆ. ಒಟ್ಟು 73 ಹೆಲಿಕಾಪ್ಟರ್​ಗಳಲ್ಲಿ ಈಗಾಗಲೆ 38 ಹೆಲಿಕಾಪ್ಟರ್​ಗಳು ಸಿದ್ಧವಾಗಿದ್ದು, ಉಳಿದವು 2022ರ ವೇಳೆಗೆ ಪೂರ್ಣಗೊಳ್ಳಲಿವೆ.

ವಿಶೇಷತೆಯೇನು?

ಮೊದಲ ಹೆಲಿಕಾಪ್ಟರ್ ಉತ್ಪಾದನೆ: 1992

ಭಾರ: 5.5 ಟನ್ ವೆಚ್ಚ: ಅಂದಾಜು 45 ಕೋಟಿ ರೂ.

ಮಾದರಿ: ಎಎಲ್​ಎಚ್ ಎಂಕೆ 1ನಿಂದ ಎಂಕೆ 4

ಸಾಮರ್ಥ್ಯ: ಏರ್ ಟು ಏರ್ ಮಿಸೈಲ್, ಏರ್ ಟು ಗ್ರೌಂಡ್ ಮಿಸೈಲ್, ಡಿಜಿಟಲ್ ವೀಡಿಯೋ ರೆಕಾರ್ಡಿಂಗ್, ಟುರ್ರೆಟ್ ಗನ್, ಪ್ರತಿ ಗಂಟೆಗೆ 245 ಕಿ.ಮೀ.ನಿಂದ 292 ಕಿ.ಮೀ. ವೇಗದಲ್ಲಿ ಪ್ರಯಾಣ, 2.8 ಲಕ್ಷ ಹಾರಾಟ ಗಂಟೆಗಳು.

ಏರೋಬ್ಯಾಟಿಕ್ ತಂಡದ ಆಕರ್ಷಣೆ

ದೇಶದ ಪ್ರಮುಖ ಏರೋಬ್ಯಾಟಿಕ್ ತಂಡವಾದ ಸಾರಂಗ್, ಧ್ರುವ್ ಮೂಲಕ ವೈಮಾನಿಕ ಪ್ರದರ್ಶನ ನೀಡುತ್ತವೆ. ಏರೋ ಇಂಡಿಯಾ, ಬರ್ಲಿನ್, ಫ್ರಾನ್ಸ್ ದೇಶಗಳು ಸೇರಿ ಇನ್ನಿತರ ಕಡೆಗಳಲ್ಲಿ ನಡೆಯುವ ಏರೋ ಶೋಗಳಲ್ಲಿ ಸಾರಂಗ್ ತಂಡ ಪ್ರದರ್ಶನ ನೀಡುತ್ತದೆ. 2003ರಿಂದ ಸಾರಂಗ್ ತಂಡ ಧ್ರುವ್ ಮೂಲಕ ಆಗಸದಲ್ಲಿ ಚಿತ್ತಾರ ಮೂಡಿಸುವ ಕೆಲಸ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net