

ಅವಿನಾಶ್ ಜೈನಹಳ್ಳಿ ಮೈಸೂರು
‘ಶ್ರೀ ಚಾಮುಂಡೇಶ್ವರಿ ತಾಯಿಯನ್ನು ಹೊರುವುದಕ್ಕೆ ಹುಟ್ಟಿದ್ದೇನೆ ಎನ್ನುವುದು ಅಭಿಮನ್ಯುವಿನ ನಂಬಿಕೆ, ಭಕ್ತಿ. ಇದೇ ಉದ್ದೇಶಕ್ಕೆ ತನ್ನನ್ನು ಮೈಸೂರಿಗೆ ಕರೆ ತಂದಿದ್ದಾರೆ ಎಂದು ಸಿದ್ಧನಾಗಿರುತ್ತಾನೆ. ಬಣ್ಣ ಬಳಿದು, ಸಿಂಗಾರಿಸಿದಾಗಂತೂ ಆತನ ಖುಷಿ ಹೇಳತೀರದು. ಹಾಗಾಗಿ ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಯಲ್ಲಿ ನಮ್ಮ ಅಭಿಮನ್ಯು ಸತತ 5ನೇ ಬಾರಿಗೆ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿ ಎಲ್ಲರ ನಂಬಿಕೆ ಉಳಿಸಿಕೊಂಡ.
‘ಈ ಬಾರಿಯೂ ಕತ್ತಲೆ ಕವಿದು ದೀಪಾಲಂಕಾರಗಳ ಮಧ್ಯೆಯೇ ನಮ್ಮ ಅಭಿಮನ್ಯು ತನ್ನ ಸಾಮರ್ಥ್ಯ ತೋರಿಸುವಲ್ಲಿ ಯಶಸ್ವಿಯಾದ. ಯಾವುದೇ ಭಯ, ಸಂಕೋಚ, ಕೋಪಕ್ಕೆ ಒಳಗಾಗದೆ ಶಾಂತ ಸ್ವರೂಪಿಯಾಗಿ ಅಂಬಾರಿಯನ್ನು ಹೊತ್ತು ಸಾಗಿದ. ಚಾಮುಂಡೇಶ್ವರಿ ತಾಯಿ ಮೇಲೆ ಅಭಿಮನ್ಯುವಿಗೆ ಇರುವ ನಂಬಿಕೆ, ತಾಯಿಯ ಆಶೀರ್ವಾದದಿಂದ ಜಂಬೂ ಸವಾರಿ ಮೆರವಣಿಗೆ ಯಶಸ್ವಿಯಾಗಿ ನಡೆಯಿತು…’
ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಪೂರೈಸಿದ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿನ ಮಾವುತ ವಸಂತ ‘ವಿಜಯವಾಣಿ’ ಜತೆ ತಮ್ಮ ಖುಷಿ ಹಂಚಿಕೊಂಡ ಪರಿ ಇದು.
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅಭಿಮನ್ಯು ಭಾನುವಾರ ಅರಮನೆ ಅಂಗಳದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದ. ಬೆಳಗ್ಗೆಯೇ ಸ್ನಾನ ಮಾಡಿ, ಬೆಲ್ಲ, ಕುಸುರೆ, ಸೊಪ್ಪು, ಬೇಯಿಸಿದ ಧಾನ್ಯ ತಿಂದು ತನಗಾಗಿಯೇ ನಿರ್ಮಿಸಿರುವ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಅಭಿಮನ್ಯು ಆನೆಯನ್ನು ಅರಮನೆ ಅಂಗಳದಿಂದ ಸೋಮವಾರದಂದು ಮತ್ತೆ ತಮ್ಮ ಮತ್ತಿಗೋಡು ಆನೆ ಶಿಬಿರಕ್ಕೆ ಕರೆದೋಗಲು ವಸಂತ್ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಜಂಬೂಸವಾರಿಯ ಯಶಸ್ಸಿನ ಸಂಭ್ರಮ ಹಂಚಿಕೊಂಡರು.
‘ನಮ್ಮ ಅಭಿಮನ್ಯು ದೇವರ ಕೆಲಸ ಮಾಡಲು ಸದಾ ಮುಂದಿರುತ್ತಾನೆ. ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಕಂಡರೆ ಹೆಚ್ಚು ಭಕ್ತಿ ಇದೆ. ಅಭಿಮನ್ಯು ಜಂಬೂಸವಾರಿ ಹೊರುವ ಮೂಲಕ ದೇವರ ಕೆಲಸ ಮಾಡಿದ್ದಾನೆ. ನಾನು ಅವನ ಸಾರಥಿಯಾಗಿದ್ದು ಕೂಡ ದೇವರ ಕೆಲಸ. ಇಂತಹ ಕೆಲಸ ನನಗೆ ಸಿಕ್ಕಿರುವುದೇ ಪುಣ್ಯ’ ಎಂದು ಹೇಳಿದ ವಸಂತ್ ಆನಂದಭಾಷ್ಪ ಸುರಿಸಿದರು.
‘ಲಕ್ಷಾಂತರ ಜನರು ನೆರೆದಿರುವ ಜಾಗದಲ್ಲಿ ಅಂಬಾರಿ ಹೊತ್ತ ಆನೆಯನ್ನು ಮುನ್ನಡೆಸುವುದು ಸಣ್ಣ ಕೆಲಸವಲ್ಲ. ಇದು ಆನೆ ಅಥವಾ ಹುಲಿ ಓಡಿಸುವಷ್ಟು ಸುಲಭದ ಕೆಲಸವೂ ಅಲ್ಲ. ಹಾಗಾಗಿ ದೇವರು, ಜನರ ಆಶೀರ್ವಾದದಿಂದ ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ಮುಗಿದಿದೆ’ ಎಂದು ವಸಂತ ಧನ್ಯಭಾವ ವ್ಯಕ್ತಪಡಿಸಿದರು.
‘ಅಭಿಮನ್ಯು ಐದು ಬಾರಿ ಅಂಬಾರಿ ಹೊತ್ತಿದ್ದಾನೆ. ಈ ಪೈಕಿ ಕರೊನಾ ಕಾರಣದಿಂದಾಗಿ ಮೊದಲ ಎರಡು ಬಾರಿಯೂ ಅರಮನೆ ಅಂಗಳಕ್ಕೆ ಮಾತ್ರ ಜಂಬೂಸವಾರಿ ಸೀಮಿತವಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ಅಂಬಾರಿ ಹೊತ್ತು ಯಶಸ್ವಿಯಾಗಿದ್ದಾನೆ. 2022ರಲ್ಲಿ ಪೂರ್ಣ ಪ್ರಮಾಣದದಲ್ಲಿ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ಆನೆಯನ್ನು ಮುನ್ನಡೆಸಿದಾಗ ನನಗೆ ಸಾಕಷ್ಟು ಆತಂಕ ಎದುರಾಗಿತ್ತು. ಆ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಧೈರ್ಯ ತುಂಬಿದ್ದರು. ಅಭಿಮನ್ಯು ಕೂಡ ಉತ್ತಮ ರೀತಿ ಸ್ಪಂದಿಸಿದ್ದ. ಹಾಗಾಗಿ, ಕಳೆದ ವರ್ಷದ ಜಂಬೂಸವಾರಿ ಮೆರವಣಿಗೆಯಿಂದ ನನಗೆ ಇದ್ದ ಆತಂಕ ಮಾಯವಾಗಿತ್ತು. ಈ ಬಾರಿಯೂ ನಾನು ಇಟ್ಟಿದ್ದ ನಂಬಿಕೆಯನ್ನು ಅಭಿಮನ್ಯು ಮತ್ತೆ ಉಳಿಸಿಕೊಂಡ. ಅಭಿಮನ್ಯು ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ಯಶಸ್ವಿಯಾಗಿ ಐದು ವರ್ಷ ಆತನನ್ನು ಮುನ್ನಡೆಸಲು ಸಾಧ್ಯವಾಯಿತು. ಅಭಿಮನ್ಯುವಿನ ಸಾಮರ್ಥ್ಯದ ಜತೆಗೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದಿಂದ ಎಲ್ಲವೂ ಉತ್ತಮವಾಗಿ ನಡೆಯಿತು’ ಎಂದು ಸಂಭ್ರಮಿಸಿದರು.
‘25 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದೇನೆ. ಆದರೆ ಈ ಬಾರಿ ದಸರಾ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಸೇರಿದ್ದಷ್ಟು ಜನಸಂಖ್ಯೆಯನ್ನು ನಾನು ಎಂದೂ ಕಂಡಿರಲಿಲ್ಲ. ವರ್ಷದಿಂದ ವರ್ಷಕ್ಕೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಾರಿ ದೇಶ, ವಿದೇಶದಿಂದ ಆಗಮಿಸಿದ್ದ ಜನರನ್ನು ಕಂಡು ತುಂಬ ಖುಷಿಯಾಯಿತು. ಮನದಲ್ಲಿ ಏನೋ ಒಂದು ರೀತಿಯ ಸಂಭ್ರಮವೂ ಉಕ್ಕಿತು. ಇಷ್ಟು ಜನಗಳ ಮುಂದೆ ನನ್ನ ಮತ್ತು ಅಭಿಮನ್ಯು ಮೇಲೆ ಅಂಬಾರಿಯ ಜವಾಬ್ದಾರಿ ಇದ್ದಿದ್ದು ಹೆಮ್ಮೆ ಎನಿಸಿತು’ ಎಂದು ವಸಂತ ತಮ್ಮ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಭಾವುಕರಾದರು.
‘ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲು ಅಭಿಮನ್ಯುವಿನ ಮೇಲೆ ಕುಳಿತು ಛತ್ರಿ ಹಿಡಿದು ಸಾಗುತ್ತಿದ್ದೆವು. ಬಳಿಕ 8 ವರ್ಷ ಅಭಿಮನ್ಯು ಆನೆ ಗಾಡಿ ಎಳೆದ. ಐದು ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿಯೂ ನಮ್ಮದಾಗಿದೆ. ಎಂದೂ ನೋಡದಷ್ಟು ಜನರನ್ನು ಈ ಬಾರಿ ಕಂಡೆ. ಅಷ್ಟೂ ಜನ ಮೆರವಣಿಗೆಯುದ್ದಕ್ಕೂ ತಾಯಿ ಚಾಮುಂಡೇಶ್ವರಿ ಹಾಗೂ ಅಭಿಮನ್ಯುವಿಗೆ ಜೈಕಾರ ಕೂಗುತ್ತಿದ್ದುದನ್ನು ಕಂಡು ಬಹಳ ಖುಷಿಯಾಯಿತು’ ಎಂದರು.
ಈ ಬಾರಿ ಅರ್ಧ ದಾರಿಯಲ್ಲೇ ಕತ್ತಲೆಯಾಗಿತ್ತು. ದಸರೆ ದೀಪಾಲಂಕಾರವೂ ಬೆಳಗುತ್ತಿತ್ತು. ಮೆರವಣಿಗೆಯಲ್ಲಿ ಲಕ್ಷಾಂತರ ಜನರಿದ್ದರು. ಜನ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅಪಾರ ಜನ ಇದ್ದರೂ ಅಭಿಮನ್ಯು ಶಾಂತ ಸ್ವರೂಪಿಯಾಗಿ ಹೆಜ್ಜೆ ಹಾಕಿದ. ಹೆಚ್ಚಿನ ಜನರು ಸೇರಿದ್ದು ಕಂಡು ಅಭಿಮನ್ಯು ಕೂಡ ಖುಷಿಪಟ್ಟ. ಎಲ್ಲಿಯೂ ಬೆಚ್ಚದೆ, ಅಂಬಾರಿಯನ್ನು ಬ್ಯಾಲೆನ್ಸ್ ಮಾಡಿಕೊಂಡು ಯಾವುದೇ ಸಮಸ್ಯೆಯಾಗದ ರೀತಿ ಬನ್ನಿಮಂಟಪದವರೆಗೆ ಸಾಗಿದ. ಇದಕ್ಕೆ ಚಾಮುಂಡೇಶ್ವರಿ ತಾಯಿ ಆಶೀರ್ವಾದವೇ ಕಾರಣ.-ವಸಂತ ಅಭಿಮನ್ಯುವಿನ ಮಾವುತ