ತುಂಬಿದ ಕೊಡ ತುಳುಕಿತಲೇ ಪರಾಕ್

IMG-20250214-WA0021
Published on

ಹೂವಿನ ಹಡಗಲಿ (ವಿಜಯನಗರ): ತುಂಬಿದ ಕೊಡ ತುಳುಕಿತಲೇ ಪರಾಕ್... ಇದು ಈ ವರ್ಷದ ತಾಲೂಕಿನ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ.

ಸುಕ್ಷೇತ್ರ ಮೈಲಾರದಲ್ಲಿ ಶುಕ್ರವಾರ ಸಂಜೆ ಕಾರ್ಣಿಕದ ಗೊರವಯ್ಯ ರಾಮಣ್ಣ ಅವರು ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ಅಶೀರ್ವಾದ ಪಡೆದು 15 ಅಡಿ ಎತ್ತರದ ಬಿಲ್ಲನೇರಿ ಲಕ್ಷಾಂತರ ಭಕ್ತರ ನಡುವೆ   ಸದ್ದಲೇ ಎಂದು   ಮೇಲಿನಂತೆ ಕಾರ್ಣಿಕ ನುಡಿದರು.

ಗೊರವಯ್ಯನ ದೇವವಾಣಿ ಕೇಳಿದ ಭಕ್ತ ಸಮೂಹ ಕೇಕೆ ಹಾಕುತ್ತಲೇ ಸ್ವಾಮಿ ಮೈಲಾರಲಿಂಗೇಶ್ವರನ ಘೋಷವಾಕ್ಯ ಕೂಗುತ್ತ ಸಂತಸದಿಂದ ಕುಣಿದು ಕುಪ್ಪಳಿಸಿದರು.  ಈ ಬಾರಿಯ ಕಾರ್ಣಿಕವನ್ನು ನೆರೆದಿದ್ದ ಭಕ್ತರು ವಿವಿಧ ಬಗೆಯಲ್ಲಿ ವಿಶ್ಲೇಷಿಸಿದರು. ರೈತರು ನಾಡಿನಲ್ಲಿ ಮಳೆ-ಬೆಳೆ ಸಮೃದ್ಧವಾಗುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಗುವ ಮೂಲಕ ನಂತರ ಹಾನಿಯಾಗುವ ಸಂಭವವಿದೆ. ರಾಜಕೀಯ ಕ್ಷೇತ್ರದಲ್ಲಿ ಮಿಶ್ರಫಲ ದೊರಕುತ್ತದೆ ಎಂದು ಅರ್ಥೈಸಿಕೊಂಡರು.

ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಬಳ್ಳಾರಿ ಸಂಸದ ಈ.ತುಕಾರಾಂ, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ, ಡಿಸಿ ದಿವಾಕರ್, ಎಸ್ಪಿ ಬಿ‌.ಎಲ್.ಶ್ರೀಹರಿಬಾಬು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತರ ಭಕ್ತರು ನೆರೆದಿದ್ದರು.

ಈ ವರ್ಷದ ಕಾರ್ಣಿಕ ಶುಭ ಸೂಚಕವಾಗಿದೆ. ಮಳೆ, ಬೆಳೆ ಸಂಪನ್ನವಾಗಲಿದೆ. ರೈತರಿಗೆ ಶುಭವಾಗಲಿದೆ. ಕಳೆದಬಾರಿಯೂ ಉತ್ತಮ ಮಳೆ, ಬೆಳೆ ಎಲ್ಲವೂ ಉತ್ತಮವಾಗಿದ್ದವು. ಎಲ್ಲವೂ ಸೂಸೂತ್ರವಾಗಿರಲಿದೆ. - ವೆಂಕಪ್ಪಯ್ಯ ಒಡೆಯರ್, ದೇಗುಲದ ಧರ್ಮದರ್ಶಿ, ಮೈಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net