

ಹಾಸನ: ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಸೋನಮ್ ರಘುವಂಶಿ ಎಂಬ ಮಹಿಳೆ ಮದುವೆಯಾದ 11 ದಿನಗಳಲ್ಲೇ ತನ್ನ ಪತಿ ರಾಜಾ ರಘುವಂಶಿಯನ್ನು ಹನಿಮೂನ್ ನೆಪದಲ್ಲಿ ಕರೆದೊಯ್ದು ಭೀಕರವಾಗಿ ಕೊಲೆಗೈದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಿಯಕರನಿಗಾಗಿ ಕಟ್ಟಿಕೊಂಡ ಗಂಡನಿಗೆ ಗುಂಡಿ ತೋಡಿದ ಪಾಪಿ ಪತ್ನಿಯ ಕ್ರೂರ ಮನಸ್ಥಿತಿಯ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ.
'ಇಂಡಿಯಾ ಟುಡೇ' ಸುದ್ದಿ ಸಂಸ್ಥೆ ಪ್ರಕಟಿಸಿದ ವರದಿ ಪ್ರಕಾರ, ಹಾಸನ ಜಿಲ್ಲೆಯ 28 ವರ್ಷದ ವಿವಾಹಿತ ಮಹಿಳೆಯೊಬ್ಬಳು, ಕೆಲವು ದಿನಗಳ ಹಿಂದೆಯಷ್ಟೇ ಫೇಸ್‌ಬುಕ್ ಮೂಲಕ ಪುನೀತ್ ಎಂಬ ಯುವಕನನ್ನು ಪರಿಚಯ ಮಾಡಿಕೊಂಡಿದ್ದಳು. ಕಳೆದ ಗುರುವಾರ (ಜೂನ್. 19) ಫೇಸ್‌ಬುಕ್‌ನಲ್ಲಿ ಮೊದಲು ಆರೋಪಿ ಪುನೀತ್‌ನೊಂದಿಗೆ ಪ್ರೀತಿ ಮಾತಿನ ಸಂಪರ್ಕ ಬೆಳೆಸಿಕೊಂಡಿದ್ದಾಳೆ. ಇಬ್ಬರ ನಡುವೆ ಆನ್‌ಲೈನ್ ಮಾತುಕತೆ ನಡೆದು, ನಂತರ ಫೋನ್ ಕಾಲ್ಗಳು ಹೆಚ್ಚಾಗಿವೆ. ಇದರ ಬೆನ್ನಲ್ಲೇ ಮೊದಲ ಬಾರಿಗೆ ಇಬ್ಬರೂ ಪರಸ್ಪರ ಭೇಟಿಯಾದರು. ಆದರೆ, ಅದೇ ಅವರ ಕೊನೆಯ ಭೇಟಿಯಾಗಿದೆ.
ಪುನೀತ್ ಪ್ರೀತಿಯನ್ನು ಹಾಸನದಿಂದ ಮೈಸೂರಿಗೆ ಬಾಡಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಸಮಯ ಕಳೆದಿದ್ದಾರೆ. ನಂತರದಲ್ಲಿ ಕೆಆರ್ಎಸ್ ಬಳಿಯ ಲಾಡ್ಜ್‌ಗೆ ತೆರೆಳಿದ ಇಬ್ಬರೂ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಇದಾದ ನಂತರ ಪ್ರೀತಿ ತನ್ನೊಂದಿಗೆ ದೈಹಿಕ ಸಂಬಂಧವನ್ನು ಮುಂದುವರಿಸುವ ಬಯಕೆಯನ್ನು ಪುನೀತ್ ಬಳಿ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.
ಇದು ಪುನೀತ್ಗೆ ಇಷ್ಟವಿರಲಿಲ್ಲ. ಕೆಆರ್ ಪೇಟೆ ತಲುಪಿದಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ಕಟ್ಟೇರಘಟ್ಟದ ಅರಣ್ಯ ಪ್ರದೇಶಕ್ಕೆ ಪ್ರೀತಿಯನ್ನು ಕರೆದೊಯ್ದ ಪುನೀತ್, ಪ್ರೇಯಸಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಪ್ರೀತಿ ಮೇಲೆ ಕಲ್ಲನ್ನು ಎಸೆದು ಕೊಂದ ಆರೋಪಿ, ಆಕೆಯ ಶವವನ್ನು ಕರೋತಿಗ್ರಾಮಕ್ಕೆ ಸಾಗಿಸಿ, ತನ್ನ ಕೃಷಿಭೂಮಿಯಲ್ಲೇ ಹೂಳಿರುವುದು ಬೆಳಕಿಗೆ ಬಂದಿದೆ.
ಜೂನ್ 23ರಂದು ಹಾಸನದಲ್ಲಿ ಪ್ರೀತಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಪ್ರೀತಿ ಮೊಬೈಲ್ಗೆ ಕರೆ ಮಾಡಿದಾಗ ಪುನೀತ್ ಕರೆ ಸ್ವೀಕರಿಸಿ ಮಾತನಾಡಿದ್ದಾನೆ. ಪೊಲೀಸರಿಗೆ, ಅವರು ನನ್ನ ಕಾರಿನಲ್ಲಿ ಬಾಡಿಗೆ ಬಂದಿದ್ದರು. ಆ ನಂತರ ಬಸ್ ಹತ್ತಿ ಹೋದರು. ಈ ಮಧ್ಯೆ ಮೊಬೈಲ್ ಅನ್ನು ನನ್ನ ಕಾರಿನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪುನೀತ್ ಸುಳ್ಳು ಹೇಳಿದ್ದ.
ಆದಾಗ್ಯೂ, ಪುನೀತ್ ಊರಿನ ಗ್ರಾಮಸ್ಥರು ಇಲ್ಲೇ ಸಮೀಪದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಮೃತದೇಹ ನನ್ನ ಪತ್ನಿಯದ್ದೇ ಎಂದು ಪ್ರೀತಿ ಪತಿ ಗುರುತಿಸಿದ ಬೆನ್ನಲ್ಲೇ ಪೊಲೀಸರು ಆರೋಪಿ ಪುನೀತ್ನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).