ಆ.19ರಂದು ಎಚ್.ಎಸ್.ರುದ್ರಪ್ಪ ಸಂಸ್ಮರಣೆ

kodihalli
Published on

ಶಿವಮೊಗ್ಗ: ನಗರದ ಅಂಬೇಡ್ಕರ್ ಭವನದಲ್ಲಿ ಆ.19ರಂದು ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ರುದ್ರಪ್ಪ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಪ್ರವಾಸಿ ಮಂದಿರದಿಂದ ರುದ್ರಪ್ಪ ಅವರ ಭಾವಚಿತ್ರದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ಭವನ ತಲುಪಲಾಗುವುದು. ಅನೇಕ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕೆಎಸ್‌ಆರ್‌ಟಿಸಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. 7ನೇ ವೇತನ ಆಯೋಗದ ಶಿಫಾರಸಿನಂತೆ ಅವರಿಗೆ ಸೌಲಭ್ಯ ನೀಡಬೇಕು. ಯಾವ ಕಾರಣಕ್ಕೂ ನೌಕರರ ಮೇಲೆ ಎಸ್ಮಾ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಯಿಂದ ಆರ್ಥಿಕ ವ್ಯವಸ್ಥೆ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದೆ. ದೇಶ ದೇಶಗಳ ನಡುವೆ ದ್ವೇಷ ಹುಟ್ಟಿಸಿರುವ ಟ್ರಂಪ್ ವ್ಯಾಪಾರಿ ಜಾಣ್ಮೆ ಮೆರೆಯುತ್ತಿದ್ದಾರೆ. ಸುಂಕ ಹೆಚ್ಚಳ ಮಾಡುವ ಮೂಲಕ ತೊಂದರೆ ನೀಡುತ್ತಿದ್ದಾರೆ. ಹಾಗಾಗಿ ಭಾರತದೊಳಕ್ಕೆ ಬರುವ ಅಮೆರಿಕದ ಸರಕುಗಳಿಗೆ ಇಲ್ಲಿಯೂ ದುಬಾರಿ ತೆರಿಗೆ ವಿಧಿಸಬೇಕೆಂದು ಆಗ್ರಹಿಸಿದರು.

ಟ್ರಂಪ್ ನಮ್ಮ ದೇಶದ ಮಾರುಕಟ್ಟೆಯನ್ನು ಪ್ರವೇಶಿಸುವ ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಅಸಹಾಯಕ ಸ್ಥಿತಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ನಮ್ಮ ಹೈನೋದ್ಯಮವನ್ನು ನಾಶಮಾಡುವ ಪ್ರಯತ್ನವನ್ನು ಟ್ರಂಪ್ ಮಾಡುತ್ತಿದ್ದಾರೆ ಎಂದು ದೂರಿದರು.

ಸುಂಕರಹಿತವಾಗಿ ಭಾರತದೊಳಗೆ ಅಮೆರಿಕದ ಹೈನು ಉತ್ಪನ್ನಗಳನ್ನು ಕಳಿಸುವುದು, ಕುಲಾಂತರಿ ಆಹಾರ ಪದಾರ್ಥಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರುವ ಪ್ರಯತ್ನ ಮಾಡಲಾಗುತ್ತಿದೆ. ಇವುಗಳ ಸುಂಕಮುಕ್ತ ಪ್ರವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಇಲ್ಲಿಯ ಮಾರುಕಟ್ಟೆ ಮೇಲೆ ಆಕ್ರಮಣ ಮಾಡುವ ತಂತ್ರಗಾರಿಕೆ ಹೊಂದಿರುವಂತೆ ಕಾಣುತ್ತಿದೆ. ಟ್ರಂಪ್ ತಂತ್ರಕ್ಕೆ ನಮ್ಮ ದೇಶದ ರೈತರನ್ನು ಮತ್ತು ಉದ್ಯಮಿಗಳನ್ನು ಬಲಿಕೊಡಬಾರದು ಎಂದು ಆಗ್ರಹಿಸಿದರು.

ಪ್ರಮುಖರಾದ ಮಂಜುನಾಥ್, ಈಶ್ವರಪ್ಪ, ಸಂತೋಷ್, ಬಸವರಾಜ್ ಮಲ್ಲನಗೌಡ, ದೇವಪ್ಪ, ಶೇಖರಪ್ಪ, ಬಸವಗೌಡ ಪಾಟೀಲ್, ಹಾರ‌್ನಳ್ಳಿ ಕೃಷ್ಣಪ್ಪ, ಗಣೇಶ್, ಸಿದ್ದೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net