

ಬೆಂಗಳೂರು ಯಾವುದೇ ವಿಷಯಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಮೂಲಕ ತಮ್ಮ ಜೀವಿತದ ಕೊನೆಯವರೆಗೂ ಮೂಢನಂಬಿಕೆಗಳ ವಿರುದ್ಧ ಎಚ್. ನರಸಿಂಹಯ್ಯ ಹೋರಾಟ ಮಾಡಿದ್ದರು ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ನಿರ್ದೇಶಕ ಡಾ.ಕೆ.ಪಿ. ಪುತ್ತೂರಾಯ ತಿಳಿಸಿದರು.
ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ನ್ಯಾಷನಲ್ ಎಜುಕೇಷನ್ ಸೊಸೈಟಿ ಮಾಜಿ ಅಧ್ಯಕ್ಷ, ಗಾಂಧಿವಾದಿ ಎಚ್. ನರಸಿಂಹಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರಿಂದ ಪ್ರೇರಣೆಗೊಂಡಿದ್ದ ನರಸಿಂಹಯ್ಯ ಅವರು 1942ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದರು. ಈ ಎಲ್ಲ ಕಾರಣಗಳಿಂದ ಎಚ್.ನರಸಿಂಹಯ್ಯ ಅವರು ಭೌತಿಕವಾಗಿ ಇಲ್ಲವಾದರೂ ಸಾವರ್ಗಜನಿಕವಾಗಿ ಅವರ ವಿಚಾರಧಾರೆ ಮೂಲಕ ಇಂದಿಗೂ ಬದುಕಿದ್ದಾರೆ.
ಬಡತನ ಅಡ್ಡಿಯಾಗಿಲ್ಲ:
ಕಡು ಬಡತನದಿಂದಲೇ ಬೆಳೆದು ಬಂದ ಅವರ ಸಾಧನೆಗೆ ಬಡತನ ಅಡ್ಡಿಯಾಗಿಲ್ಲ. ಇವರು ಮಾತ್ರವಲ್ಲ, ಸರ್.ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಸೇರಿ ಹತ್ತಾರು ಸಾಧಕರು ಕೂಡ ನಡೆದು ಬಂದ ದಾರಿ ಬಡತನವಾಗಿತ್ತು. ಹಾಗೆಯೇ ಸಾಧನೆಗೂ ಜಾತಿಗೂ ಸಂಬಂಧವಿಲ್ಲ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ, ಕಾರ್ಯದರ್ಶಿ ವಿ. ವೆಂಕಟಶಿವಾರೆಡ್ಡಿ ಮತ್ತು ಪ್ರಾಂಶುಪಾಲ ಡಾ. ಬಿ. ಸುರೇಶ್ ಸೇರಿ ಹಲವರು ಉಪಸ್ಥಿತರಿದ್ದರು.