

ಈಗ ಎಲ್ಲೆಲ್ಲೂ ಕರೊನಾ ವೈರಸ್ ಬಗ್ಗೆಯೇ ಮಾತು. ಅಲ್ಲಿ ಹೋಗಬೇಡಿ..ಇಲ್ಲಿಗೆ ಹೋಗಬೇಡಿ ಎಂಬಂತಹ ಸಲಹೆಗಳು. ಅನೇಕರು ಭಯದಿಂದ ಪ್ರಯಾಣ ಮಾಡುವುದನ್ನೇ ಬಿಟ್ಟಿದ್ದಾರೆ. ಮಾರ್ಕೆಟ್, ಸಿನಿಮಾ ಹಾಲ್ಗಳು, ಮಾಲ್ಗಳು, ಶಾಪಿಂಗ್ ಸೆಂಟರ್ಗಳೆಲ್ಲ ಬಿಕೋ ಎನ್ನುತ್ತಿವೆ. ಸಾರ್ವಜನಿಕ ಸಮಾರಂಭಗಳು ನಡೆಯುತ್ತಿಲ್ಲ.
ಈಗ ಇನ್ನೊಂದು ವಿಚಾರವನ್ನು ತಜ್ಞರು ತಿಳಿಸಿದ್ದಾರೆ. ಜಿಮ್ಗೆ ಹೋಗುವವರೇ ಎಚ್ಚರಿಕೆಯಿಂದ ಇರಿ ಎಂದು ಕಳಕಳಿಯುತ ಸಲಹೆ ನೀಡಿದ್ದಾರೆ. ಜಿಮ್ ಸೆಂಟರ್ಗಳಲ್ಲಿ ಕೊರೊನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತವೆ. ಹಾಗಾಗಿ ವ್ಯಾಯಾಮ ಮಾಡಲು ಅಲ್ಲಿಗೆ ತೆರಳುವವರು ತುಂಬ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಜಿಮ್ ಕೇಂದ್ರದಲ್ಲಿ ಒಂದು ಸಲಕ್ಕೆ ಹಲವರು ವ್ಯಾಯಾಮ, ವರ್ಕ್ಔಟ್ ಮಾಡುತ್ತಾರೆ. ಅಲ್ಲಿ ಪ್ರತಿಯೊಬ್ಬರೂ ಬೆವರುತ್ತಾರೆ. ಈ ಬೆವರಿನ ಮೂಲಕ ಸೋಂಕು ಶೀಘ್ರವಾಗಿ ಪಸರಿಸುತ್ತದೆ ಎಂದು ಪತ್ರಕರ್ತೆಯೂ ಆಗಿರುವ ವೈದ್ಯೆ ಡಾ. ನಾರ್ಮನ್ ಸ್ವಾನ್ ತಿಳಿಸಿದ್ದಾರೆ.
ಬೆವರುವುದರಿಂದ ಮೈಯೆಲ್ಲ ಒದ್ದೆಯಾಗುತ್ತದೆ. ಯಾವ ವೈರಸ್ ಆಗಿರಲಿ, ಸೂಕ್ಷ್ಮ ಜೀವಿಗಳಾಗಿರಲಿ ತೇವವಿದ್ದಾಗ ಬೇಗನೇ ಹರಡುತ್ತವೆ. ನೀವೇನೋ ನಿಮ್ಮ ಪಾಡಿಗೆ ವ್ಯಾಯಾಮ ಮಾಡುತ್ತಿರುತ್ತೀರಿ. ಒಬ್ಬರು ಬಳಸಿದ ವ್ಯಾಯಾಮ ಸಾಧನಗಳನ್ನೇ ನೀವು ಬಳಸುತ್ತೀರಿ. ಅದರ ಮೇಲೆ ಹಲವರ ಬೆವರಿನ ಕಣಗಳು ಇರುತ್ತವೆ. ನಿಮ್ಮ ವರ್ಕ್ಔಟ್ ಮಾಡುವ ಸಾಧನಗಳೇ ಬಹುಬೇಗ ಕರೊನಾ ವೈರಸ್ನ್ನು ಹಬ್ಬಿಸಬಲ್ಲವು ಎಂಬ ಸತ್ಯ ಗೊತ್ತಿರಬೇಕು. ಈ ಬಗ್ಗೆ ಜಾಗೃತಿ ಇರಬೇಕು ಎಂದಿದ್ದಾರೆ.
ಕರೊನಾ ವೈರಸ್ ಹರಡುತ್ತದೆ ಎಂಬ ಕಾರಣಕ್ಕೆ ಜಿಮ್ಗೆ ಹೋಗುವುದನ್ನೇ ತಪ್ಪಿಸಬೇಕು. ವ್ಯಾಯಾಮ ಮಾಡುವುದನ್ನು ಬಿಡಬೇಕು ಎಂದು ಹೇಳುತ್ತಿಲ್ಲ. ಆದರೆ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಒಬ್ಬರು ಒಂದು ಸಾಧನವನ್ನು ಬಳಕೆ ಮಾಡಿದ ಮೇಲೆ, ನೀವು ಅದರ ಮೇಲೆ ಕುಳಿತುಕೊಳ್ಳುವ ಮೊದಲು ಒರೆಸಿ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸ್ಕಾಟ್ಲೆಂಡ್ನ ವಿಶ್ವವಿದ್ಯಾಲಯವೊಂದರಿಂದ ಔಷಧಶಾಸ್ತ್ರದಲ್ಲಿ ಪದವಿ ಪಡೆದಿರುವ ಡಾ. ನಾರ್ಮನ್ ಸ್ವಾನ್, ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಸದಾ ಜತೆಗೆ ಇಟ್ಟುಕೊಳ್ಳಿ. ವ್ಯಾಯಾಮ ಮಾಡಿಯಾದ ಮೇಲೆ ಕೈಯಿ ತೊಳೆಯಿರಿ, ಶೀತ, ಕೆಮ್ಮು ಇರುವವರು ಜಿಮ್ಗೆ ಹೋಗಬೇಡಿ ಎಂದು ಹೇಳಿದ್ದಾರೆ. ಅಲ್ಲದೆ, ನಾನಂತೂ ವೈರಸ್ ಬಹುಬೇಗನೇ ಹರಡಬಹುದಾದ ಆರ್ದ್ರ ಪ್ರದೇಶಗಳಿಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಜಿಮ್ನಲ್ಲಿ ತರಬೇತುದಾರರು ಸಾಧ್ಯವಾದಷ್ಟು ಅಲ್ಲಿಗೆ ಬರುವವರ ಮೈ ಮುಟ್ಟಿ ಕಲಿಸುವುದನ್ನು ಬಿಡಬೇಕು ಎಂದು ಡಾ. ಸ್ವಾನ್ ತಿಳಿಸಿದ್ದಾರೆ.
1.ವ್ಯಾಯಾಮ ಸಾಧನಗಳನ್ನು ಸ್ವಚ್ಛಗೊಳಿಸಿಕೊಂಡು ಬಳಸಿ
2. ಅಲ್ಲಿ ತೆಗೆದುಕೊಂಡು ಹೋಗುವ ನೀರಿನ ಬಾಟಲಿಗಳನ್ನು ಪ್ರತಿದಿನವೂ ತೊಳೆಯಿರಿ.
3. ಆಗಾಗ ಕೈ ಸ್ವಚ್ಛಗೊಳಿಸಿಕೊಳ್ಳಿ.
4. ಎಲ್ಲರೂ ಬೆವರುವುದರಿಂದ ಮೈಕೈ ತಗುಲಿಸಿಕೊಳ್ಳಬೇಡಿ.