ಗ್ಯಾರಂಟಿ ಯೋಜನೆ ಜಿಲ್ಲಾ ಮಟ್ಟದಲ್ಲೂ ಸಭೆ ನಡೆಸುತ್ತಿರುವ ರೇವಣ್ಣ ಸಿಎಂ ಅಧ್ಯಕ್ಷತೆಯಲ್ಲಿ ಶೀಘ್ರ ಪ್ರಗತಿ ಪರಿಶೀಲನಾ ಸಭೆ

Published on

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:

ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಕಸರತ್ತು ಮಾಡುತ್ತಿದ್ದು, ಚುನಾವಣೆ ಬಳಿಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ.

ಮಾಜಿ ಸಚಿವ ಎಚ್.ಎಂ.ರೇವಣ್ಣ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯು ಈಗಾಗಲೇ ಜಿಲ್ಲಾ ಮಟ್ಟದಲ್ಲಿಯೂ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದೆ.

ಈಗಾಗಲೇ ಮೈಸೂರು, ಕೋಲಾರ, ಶಿವಮೊಗ್ಗ, ಕಲಬುರ್ಗಿ, ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ 11 ಜಿಲ್ಲೆಯಲ್ಲಿ ಪ್ರವಾಸ ಮಾಡಿರುವ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು, ಮತ್ತೊಂದು ಹಂತದಲ್ಲಿ ಎಲ್ಲಾ ಜಿಲ್ಲಾ ಪ್ರವಾಸ ಮಾಡಲು ಮುಂದಾಗಿದ್ದಾರೆ. ರಾಯಚೂರು ಪ್ರವಾಸ ಮಾಡಲಿರುವ ರೇವಣ್ಣ ಅಲ್ಲಿಯೂ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಎಲ್ಲ ಜಿಲ್ಲೆಯಲ್ಲಿಯೂ ಸಮರೋಪಾದಿಯಾಗಿ ಪ್ರಗತಿ ಪರಿಶೀಲನೆ ಮಾಡಿ ಬಳಿಕ ಆ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ನಿರ್ಧರಿಸಿದ್ದಾರೆ. ಅರ್ಹ ಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ನೇರವಾಗಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರೇವಣ್ಣ, ಈ ಯೋಜನೆಗಳ ಅನುಷ್ಠಾನ ಬಗ್ಗೆ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ಮೇಲೂ ಚಾಟಿ ಬೀಸಲು ಮುಂದಾಗಿದ್ದಾರೆ.

ಯೋಜನೆಗಳ ಅನುಷ್ಠಾನದಲ್ಲಿ ಎಲ್ಲಿ ಲೋಪವಾಗಿದೆ ಎನ್ನುವುದನ್ನು ಪತ್ತೆ ಹಚ್ಚಿ, ಯಾವ ಕಾರಣಕ್ಕಾಗಿ ಯೋಜನೆ ಜಾರಿ ವಿಳಂಬವಾಗಿದೆ ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಿದ್ದಾರೆ. ಸಮಗ್ರ ವರದಿಯ ಬಳಿಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಯೋಜಿಸಿದೆ.

ಕಾಂಗ್ರೆಸ್ ತನ್ನ ಪ್ರನಾಳಿಕೆಯಲ್ಲಿ ನೀಡಿದ್ದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ನೀಡಿದ್ದರೂ, ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಕೆಲ ಸಮಸ್ಯೆಗಳು ಎದುರಾಗುತ್ತಲೇ ಇವೆ. ಅದರಲ್ಲೂ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವ ಯೋಜನೆಯ ಬಗ್ಗೆಯೇ ಹೆಚ್ಚು ದೂರುಗಳಿವೆ. ಇದೆಲ್ಲ ಸಮಸ್ಯೆಗಳನ್ನು ಆಡಳಿತಾತ್ಮಕವಾಗಿ ಬಗೆಹರಿಸಿ ಯೋಜನೆ ಅನುಷ್ಠಾನ ಮಾಡಲು ಉದ್ದೇಶಿಸಲಾಗಿದೆ.

*ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಶಕ್ತಿ ಯೋಜನೆಗಳನ್ನು ಲೋಪವಿಲ್ಲದಂತೆ ಜಾರಿಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ.

-ಎಚ್.ಎಂ.ರೇವಣ್ಣ, ಅಧ್ಯಕ್ಷರು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net