

ಶಿವಮೊಗ್ಗ: ಗುರುವಿನ ಶಕ್ತಿ ಮತ್ತು ಅನುಗ್ರಹ ಪಡೆದವರು ಎಲ್ಲ ಸಾಧನೆ ಮಾಡಬಲ್ಲರು ಎಂದು ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್ ಹೇಳಿದರು. ಜಯನಗರದ ರಾಮಮಂದಿರದಲ್ಲಿ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಮತ್ತು ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಗುರು ಪೂರ್ಣಿಮಾರ್ಚನಂ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಶತಮಾನಗಳಿಂದ ಗುರು ಮುಖೇನವೇ ಭಾರತೀಯ ವಿದ್ಯೆಗಳು ಉಪದೇಶಗೊಂಡಿವೆ. ಆ ವಿದ್ಯೆ ಸಿದ್ಧಿಗೊಳ್ಳಲು ಗುರುವಿನ ಅನುಗ್ರಹ ಬಹಳ ಮುಖ್ಯ. ಭಾರತೀಯ ವಿದ್ಯೆಗಳು ಚತುರ್ವಿಧ ಪುರುಷಾರ್ಥದಡಿ ಕೊನೆಗೊಳ್ಳುವುದು ಮೋಕ್ಷದಲ್ಲಿ. ಎಲ್ಲ ವಿದ್ಯೆಗಳೂ ಒಳಸಂಬಂಧ ಹೊಂದಿ ಆತ್ಮ ಸಾಕ್ಷಾತ್ಕಾರ ಹೊಂದುವುದೇ ಅಂತಿಮ ಉದ್ದೇಶ. ಭಾರತದಲ್ಲಿ ಗುರುವಿಗೆ ವಿಶೇಷ ಸ್ಥಾನ ನೀಡಲಾಗಿದೆ ಎಂಬುದೇ ವಿಶೇಷ ಎಂದು ತಿಳಿಸಿದರು. ವಿದ್ವಾನ್ ಜೆ.ಎಸ್.ಶ್ರೀಕಂಠ ಭಟ್ ಅವರು ಶಿವಮೊಗ್ಗದಲ್ಲಿ ಸಂಗೀತ ಕಲಿತು ಬೆಂಗಳೂರು-ತುಮಕೂರಿನಲ್ಲಿ ಸಂಗೀತ ವಿದ್ಯೆ ಧಾರೆ ಎರೆಯುತ್ತಿದ್ದಾರೆ. ಅವರು ಸಂಸ್ಥೆಯ ರಜತ ಮಹೋತ್ಸವದ ಸಂದರ್ಭ ಶ್ರೀ ಗುರುಪೂರ್ಣಿಮಾರ್ಚನಂ ಕೃತಿ ಪ್ರಕಟಿಸಿರುವುದು ಶ್ಲಾಘನೀಯ ಎಂದರು. ವಿದ್ವಾನ್ ಜೆ.ಎಸ್.ಶ್ರೀಕಂಠ ಭಟ್ ಮಾತನಾಡಿ, ಪ್ರತಿ ಸಮುದಾಯ ಮತ್ತು ಧರ್ಮದಲ್ಲೂ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ವಿಶ್ವದಲ್ಲಿರುವ ಎಲ್ಲ ಧರ್ಮಕ್ಕೂ ಒಬ್ಬೊಬ್ಬ ಗುರುಗಳಿದ್ದಾರೆ. ಗುರು ಎಂಬುದು ವ್ಯಕ್ತಿಯಲ್ಲ, ಅದೊಂದು ದಿವ್ಯ ಶಕ್ತಿ ಎಂದರು. ಅಪರ್ಣಾ ಸತ್ಯನಾರಾಯಣ ಮತ್ತು ಅಂಕುಶ್ ಅವರ ಯುಗಳ ಗಾಯನ ರಂಜಿಸಿತು. ವಿದುಷಿ ಸಂಧ್ಯಾ ಸ್ವಾಮಿ ಅವರ ಶಾಸ್ತ್ರೀಯ ಸಂಗೀತ ಮುದ ನೀಡಿತು. ನಿಖಿಲ್ಕುಮಾರ್ (ಮೃದಂಗ), ವಿದ್ವಾನ್ ಮತ್ತೂರು ಮಧು ಮುರಳಿ (ಪಿಟೀಲು) ಸಹಕಾರ ನೀಡಿದರು. ಮನೋವೈದ್ಯ ಡಾ. ಕೆ.ಆರ್.ಶ್ರೀಧರ, ವಿದುಷಿ ವಿಜಯಾ ಕಾಂತೇಶ ಹಾಜರಿದ್ದರು.
ತಂದೆ, ತಾಯಿ ನಂತರದ ಪೂಜ್ಯ ಸ್ಥಾನ ಇರುವುದೇ ಗುರುವಿಗೆ. ಒಂದು ಪಕ್ಷ ಹರ (ದೇವರು) ಮುನಿದರೂ ಗುರು ನಮ್ಮನ್ನು ಕಾಯುತ್ತಾನೆ ಎಂಬುದು ಭಾರತೀಯರ ಅಚಲ ನಂಬಿಕೆ. ಬದುಕಿಗೆ ದಾರಿ ತೋರಿ ನಮ್ಮೆಲ್ಲರನ್ನು ಉದ್ಧರಿಸುವ ಗುರುವಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಶ್ರೀ ಗುರುಪೂರ್ಣಿಮಾರ್ಚನಂ ಕೃತಿ ಸಾರ್ಥಕವಾಗಿದೆ. - ವಿಜಯಾ ಶ್ರೀಧರ, ಸಾಹಿತಿ