

ಶಿವಮೊಗ್ಗ: ವಿದ್ಯಾರ್ಥಿಗಳು ಸಮಯಪ್ರಜ್ಞೆ, ಕರ್ಮಪ್ರಜ್ಞೆಯನ್ನು ಕಾಪಾಡಿಕೊಳ್ಳದೇ ಇದ್ದರೆ ದೇಶದ ಭವಿಷ್ಯ ಉತ್ತಮವಾಗುವುದಿಲ್ಲ. ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬುದನ್ನು ಅರಿತು ವರ್ತಿಸದಿದ್ದರೆ ಮನುಷ್ಯರಿಗೂ ಮತ್ತು ನಾಲ್ಕು ಕಾಲಿನ ಪ್ರಾಣಿಗೂ ವ್ಯತ್ಯಾಸವೇ ಇರುವುದಿಲ್ಲ ಎಂದು ಕೊಲ್ಲಾಪುರ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸುಮಾರು 1,500 ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ನಿಧಿ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಭಾವಂತರನ್ನು ಪುರಸ್ಕರಿಸುವುದು ಈ ದೇಶದ ವಾಡಿಕೆ, ಸಂಸ್ಕೃತಿ. ಇದನ್ನು ಮಾಡದಿರುವ ಸಮಾಜವನ್ನು ಅಂಧ ಸಮಾಜ ಎನ್ನಬೇಕಾಗುತ್ತದೆ. ನಮ್ಮ ಶಿಕ್ಷಣಕ್ಕೆ ಬಹುದೊಡ್ಡ ಇತಿಹಾಸವಿದೆ. ಶತಮಾನಗಳ ಹಿಂದೆ ನೂರಾರು ಗುರುಕುಲಗಳಿದ್ದವು. ವಿಶ್ವವಿದ್ಯಾಲಯಗಳಿದ್ದವು. ಅವು ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುತ್ತಿದ್ದವು ಎಂದರು.
ನಮ್ಮ ಪ್ರಾಚೀನ ಗುರುಕುಲದಿಂದ ಹೊರಬಂದ ವಿದ್ಯಾರ್ಥಿ ತನ್ನ ಕಾಲಿನ ಮೇಲೆ ನಿಂತು ಮತ್ತೂ ನಾಲ್ಕು ಮಂದಿಗೆ ಉದ್ಯೋಗ ನೀಡುತ್ತಿದ್ದ. ಇದನ್ನು ಮೆಕಾಲೆ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದ. ಭಾರತದಲ್ಲಿ ಓರ್ವ ನಿರುದ್ಯೋಗಿಯೂ ತಯಾರಾಗುವುದಿಲ್ಲ. ಅಲ್ಲಿನ ಶಿಕ್ಷಣದ ಕಾರಣದಿಂದ ಯಾವುದೇ ಸಂಘರ್ಷ ಹುಟ್ಟುವುದಿಲ್ಲ ಎಂದು ಉಲ್ಲೇಖ ಮಾಡಿದ್ದ ಎಂದು ತಿಳಿಸಿದರು.
ನಮ್ಮ ಪ್ರಾಚೀನ ಶಿಕ್ಷಣ ಸ್ವಾರ್ಥಿಗಳನ್ನಲ್ಲ, ತ್ಯಾಗಿಗಳನ್ನು ನಿರ್ಮಾಣ ಮಾಡುತ್ತಿತ್ತು. ಸಂವೇದನಾಶೀಲ ಶಿಕ್ಷಣ ನಮ್ಮದಾಗಿತ್ತು. ನಮ್ಮ ಶೈಕ್ಷಣಿಕ ಇತಿಹಾಸ ವಿಶೇಷವಾಗಿತ್ತು. ಬ್ರಿಟಿಷರ ಕಾರಣದಿಂದ ನಮ್ಮ ಶಿಕ್ಷಣ ವ್ಯವಸ್ಥೆಯೇ ನಿಂತು ಹೋಯಿತು. ಬದಲಿಗೆ ಬ್ರಿಟಿಷರ ಶಿಕ್ಷಣ ಮಾದರಿ ಜಾರಿಗೆ ಬಂದಿತು ಎಂದರು.
ದೇಶದ ಇತಿಹಾಸ ಅರಿಯದ ವ್ಯಕ್ತಿ ಹೊಸ ಇತಿಹಾಸ ಸೃಷ್ಟಿಸಲಾರ. ಹೀಗಾಗಿ ನಾವು ಜಾಗೃತರಾಗಬೇಕು. ಇಲ್ಲಿಯ ಎಲ್ಲವನ್ನೂ ಬಳಸಿಕೊಂಡು ಬೆಳೆದಿರುವ ನಾವು ದೇಶದ ಒಳಿತಿಗೆ ಪೂರಕವಾಗಿ ಕೆಲಸ ಮಾಡಬೇಕು. ಹೆಚ್ಚು ಪ್ಯಾಕೇಜ್‌ಗಾಗಿ ವಿದೇಶಿ ವ್ಯಾಮೋಹ ಸರಿಯಲ್ಲ ಎಂದು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿನಿಯರಾದ ನಿತ್ಯಾ ಎಂ. ಕುಲಕರ್ಣಿ, ಕೆ.ನಮನಾ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಗಂಧ ಸಂಸ್ಥೆಯ ಸ್ಥಾಪಕ ಸದಸ್ಯರು ಕೆ.ಎಸ್.ಈಶ್ವರಪ್ಪ ದಂಪತಿಯನ್ನು ಅಭಿನಂದಿಸಿದರು. ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಇತರರಿದ್ದರು.