

ಮೈಸೂರು: ಅವರೆಲ್ಲ ಅಂಗವಿಕಲರು, ಮುಗ್ಧರು, ಅಮಾಯಕರು, ಪ್ರಾಪಂಚಿಕ ಅರಿವಿನ ಕೊರತೆಯಿರುವ ಮಕ್ಕಳು… ಈ ಮಕ್ಕಳ ಜತೆಗೆ ಅವಧೂತ ಅರ್ಜುನ ಗುರೂಜಿ ಅವರು ಸಂವಾದ ನಡೆಸಿದರು. ಅವರ ಮುಗ್ಧ ಮತ್ತು ನಿಷ್ಕಲ್ಮಶ ಮನಸ್ಸಿನ ನಮಸ್ಕಾರ ಸ್ವೀಕರಿಸಿ ಆಶೀರ್ವದಿಸಿದರು. ಅವರ ಮುಗ್ಧ ಪ್ರಶ್ನೆಗಳಿಗೆ ಅರ್ಥವಾಗುವಂತೆ ಉತ್ತರಿಸಿದರು.
ರಿಂಗ್ ರಸ್ತೆಯ ದ್ವಾರಕನಗರ(ಆರ್.ಟಿ.ನಗರ) ರೋಟರಿ ಮೈಸೂರು ಮಿಡ್ ಟೌನ್ ಮಾನಸ ಕುಟೀರದ ವತಿಯಿಂದ ನಡೆಸಲಾಗುತ್ತಿರುವ ಕರುಣಾಮಯಿ ಫೌಂಡೇಷನ್ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನ ಮತ್ತು ಓಣಂ ಕಾರ್ಯಕ್ರಮದಲ್ಲಿ ಕಂಡು ಬಂದ ಭಾವನಾತ್ಮಕ ಕ್ಷಣಗಳಿವು.
ಅವಧೂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಎಲ್ಲ ದೇವರ ಮಕ್ಕಳಿಗೆ ಭಗವಂತನ ಕೃಪೆ ಇರಲಿ ಎಂದು ಹಾರೈಸಿದರು. ಆ ಮಕ್ಕಳ ಕೈ ಹಿಡಿದು, ತಲೆ ಮೇಲೆ ಕೈಯಿಟ್ಟು, ಆಲಂಗಿಸಿಕೊಂಡು ಅವರ ಮನಸ್ಸನ್ನು ಸಮಾಧಾನಪಡಿಸಿದ ಅವಧೂತರು ನಿಮ್ಮ ಜತೆಗೆ ಸದಾ ಭಗವಂತ ಇರುತ್ತಾನೆ. ನಿಮ್ಮ ಮೇಲೆ ಅವಧೂತರ ಆಶೀರ್ವಾದವೂ ಇರಲಿದೆ ಎಂದರಲ್ಲದೆ, ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ, ಸಂಸ್ಥೆಗೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಮಾತೃ ಮಂಡಲಿ ಶಿಶು ವಿಕಾಸ ಕೇಂದ್ರದ ನಿವೃತ್ತ ಪ್ರಾಂಶುಪಾಲ ಬಿ.ವಿ.ಪಾಂಡು ಅವರನ್ನು ಸನ್ಮಾನಿಸಲಾಯಿತು. ಬಿ.ಎನ್.ಶೋಭಾ, ಜಿ.ಸಿ.ಚಿರಣ್‌ಕುಮಾರ್, ಕೆ.ವಿ.ಸೌಮ್ಯಾ ಇದ್ದರು.