ಕೋ-ಆಪರೇಟಿವ್ ಬ್ಯಾಂಕ್, ಸೊಸೈಟಿ ವಂಚನೆ ಪ್ರಕರಣ ಸಿಐಡಿಗೆ

raghavendra bank
Published on

ಬೆಂಗಳೂರು: ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಕೋ ಆಪರೇಟಿವ್ ಸೊಸೈಟಿ ವಿರುದ್ಧದ ವಂಚನೆ ಮತ್ತು ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶಿಸಿದೆ.

ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಬ್ಯಾಂಕ್ ಹಾಗೂ ಸೊಸೈಟಿಯಲ್ಲಿ ಅವ್ಯವಹಾರ ನಡೆದಿರುವ ಸಂಬಂಧ ಬಸವನಗುಡಿ ಠಾಣೆಯಲ್ಲಿ ಕೆಪಿಐಡಿ ಕಾಯ್ದೆ ಸೇರಿ ಇತರ ಸೆಕ್ಷನ್​ಗಳಡಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ದಳದಲ್ಲಿಯೂ ಎಫ್​ಐಆರ್ ದಾಖಲಾಗಿ ತನಿಖೆ ನಡೆಯುತ್ತಿತ್ತು. ಇದರ ನಡುವೆ ಬ್ಯಾಂಕ್ ಗ್ರಾಹಕರು ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಸಿಐಡಿಗೆ ತನಿಖೆ ಹೊಣೆ ವಹಿಸಬೇಕು. ಎರಡು ಸಂಸ್ಥೆಯಿಂದ ತನಿಖೆ ನಡೆಸುವುದು ಬೇಡವೆಂದು ಮನವಿ ಮಾಡಿದ್ದರು. ಇದರ ಅನ್ವಯ ಬ್ಯಾಂಕ್ ಮತ್ತು ಸೊಸೈಟಿ ವಿರುದ್ದದ ವಂಚನೆ ಮತ್ತು ಅವ್ಯವಹಾರ ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಜೂ.30ರಂದು ಆದೇಶಿಸಿದೆ.

ಎಸಿಬಿ ತನಿಖೆಯಲ್ಲಿ ಅವ್ಯವಹಾರ ಬಯಲು: ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಬ್ಯಾಂಕ್​ನ ಕೆಲ ಅಧಿಕಾರಿಗಳು, ಸಿಬ್ಬಂದಿ ಸೇರಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು 1,400 ಕೋಟಿ ರೂ. ಅವ್ಯವಹಾರ ನಡೆಸಿರುವುದು ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆರ್​ಬಿಐ ನಿಯಮಗಳಿಗೆ ವಿರುದ್ಧವಾಗಿ ಕೃತಕ ಠೇವಣಿ ಸೃಷ್ಟಿಸಿ 150 ಕೋಟಿ ರೂ. ಮೊತ್ತದ ಸಾಲವನ್ನು 60 ಕಾಲ್ಪನಿಕ ಗ್ರಾಹಕರಿಗೆ ಮಂಜೂರು ಮಾಡಿದ್ದಾರೆ. ಸಾರ್ವಜನಿಕರು ಖಾತೆ ತೆರೆಯುವಾಗ ನೀಡಿದ ಬ್ರೌಷರ್​ನಲ್ಲಿ ಎನ್​ಪಿಎ ಶೇ.1ಕ್ಕಿಂತ ಕಡಿಮೆಯಿದ್ದರೂ ನಿರಂತರವಾಗಿ ಶೇ.15 ರಿಂದ 16 ಎನ್​ಪಿಎ ಇರುವುದಾಗಿ ನಂಬಿಸಿದ್ದರು. ಬ್ಯಾಂಕ್​ನ ಎನ್​ಪಿಎ ಶೇ.25 ರಿಂದ 30 ಇರುವುದು ಎಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net