ದಾಸಸಾಹಿತ್ಯ ಪಸರಿಸಿದ ಗುರು ಭೀಮಾಚಾರ್ಯ

dasa saythya mar 20
Published on

ಬೆಳಗಿನ ಜಾವ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಪಡಸಾಲೆಯಲ್ಲಿ ಕುಳಿತು ತಂಬೂರಿ ಮೀಟುತ್ತ ದೇವರನಾಮಗಳನ್ನು ಹೇಳುತ್ತಿದ್ದರೆ ಎದುರಿನ ದನದ ಅಂಕಣದಲ್ಲಿ ನಿಂತಿರುತ್ತಿದ್ದ ದನಗಳು ಇವರನ್ನೇ ದಿಟ್ಟಿಸುತ್ತ ಆಗಾಗ ಕತ್ತನ್ನು ಅಲುಗಾಡಿಸುತ್ತಿದ್ದವು. ಹಾಡುತ್ತಿದ್ದ ವ್ಯಕ್ತಿ ಯಾರೆಂದರೆ ಋಷಿಸದೃಶ ಬಾಳನ್ನು ಬಾಳಿದ ಗುರು ಭೀಮಾಚಾರ್ಯ ಜಹಗೀರದಾರ್.

ಜನನ 1867ರಲ್ಲಿ. ತಂದೆ ಕೃಷ್ಣಾಚಾರ್ಯ ಹಾಗೂ ತಾಯಿ ಭೀಮಾಬಾಯಿ. ಊರು ತೆಗ್ಗಿಹಾಳ. ಇದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನಿಂದ 15 ಕಿ.ಮೀ. ದೂರ ಇರುವ ಒಂದು ಗ್ರಾಮ. ಹೈದರಾಬಾದಿನ ನಿಜಾಮ ಈ ಊರನ್ನು ಜಹಗೀರಾಗಿ ಕೊಟ್ಟಿದ್ದರಿಂದ ಅಲ್ಲಿಯವರೆಗೆ ಸ್ವಂತ ಊರಾಗಿದ್ದ ಕನಕಗಿರಿಯನ್ನು ಬಿಟ್ಟು ಈ ಕುಟುಂಬ ತೆಗ್ಗಿಹಾಳಿಗೆ ಬಂದು ನೆಲೆಸಬೇಕಾಯಿತು. ಅಂದಿನಿಂದ ಈ ಮನೆತನ ತೆಗ್ಗಿಹಾಳ ಜಹಗೀರದಾರ್ ಮನೆತನವಾಯಿತು. ಊರ ಜನ ಗುರುಭೀಮಾಚಾರ್ಯರನ್ನು ಪೂಜ್ಯ ಭಾವನೆಯಿಂದ ‘ತಾತ’ ಎಂದು ಕರೆಯತೊಡಗಿದರು. ಬಂಧುಬಾಂಧವರೂ ಹಾಗೆಯೇ ಕರೆಯುತ್ತಿದ್ದರು.

ಜಗನ್ನಾಥದಾಸರು ರಚಿಸಿದ ‘ಹರಿಕಥಾಮೃತಸಾರ’ ದಾಸಸಾಹಿತ್ಯದ ಮೇರುಕೃತಿ. ತಾತನವರು ಅದನ್ನು ನಿತ್ಯ ಪಾರಾಯಣ ಮಾಡುತ್ತಿದ್ದರು. ಅಲ್ಲದೆ ಬಂಧುಬಳಗದವರಿಗೆ ಹಾಗೂ ಇತರರಿಗೂ ಈ ಗ್ರಂಥದ ನುಡಿಗಳನ್ನು ಹೇಳುತ್ತ ಅವುಗಳ ತತ್ತ್ವಗಳನ್ನು ಬೋಧಿಸುತ್ತಿದ್ದರು. ದಾಸರ ಪದಗಳನ್ನು ದಿನವೂ ಹೇಳುತ್ತಿದ್ದರಲ್ಲದೆ ಬೇರೆಯವರೂ ಹೇಳುವಂತೆ ಪ್ರೋತ್ಸಾಹಿಸುತ್ತಿದ್ದರು. ದಾಸರ ಪದಗಳಲ್ಲಿರುವ ಕಠಿಣ ಶಬ್ದ ಹಾಗೂ ಸಂದರ್ಭಗಳನ್ನು ಸರಳವಾಗಿ ಮನಂಬುಗುವಂತೆ ತಿಳಿಸಿ ಹೇಳುತ್ತಿದ್ದರು. ಹರಿಕಥಾಮೃತಸಾರ ಹಾಗೂ ದಾಸರ ಪದಗಳ ಅಂದರೆ ದಾಸಸಾಹಿತ್ಯದ ಪ್ರಚಾರ ಕೈಂಕರ್ಯವೇ ತಾತನವರ ಜೀವನದ ಧ್ಯೇಯವಾಗಿತ್ತು. ತಾವು ಸ್ವತಃ ‘ಹೇಮಗಿರೀಶ’ ಎನ್ನುವ ಅಂಕಿತದಿಂದ ಕೆಲವು ಪದಗಳನ್ನು ರಚಿಸಿದ್ದರು.

ಸಾಯಂಕಾಲ ತಮ್ಮ ಊರಿನ ಆಸಕ್ತರನ್ನು ಕೂಡಿಸಿಕೊಂಡು ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ರಸವತ್ತಾಗಿ ಹೇಳುವುದು ಇವರ ದಿನಚರಿಯ ಒಂದಂಶ. ಅವುಗಳಲ್ಲಿ ಮನುಕುಲದ ಹಿತಕ್ಕಾಗಿ ನಿರೂಪಿತವಾಗಿರುವ ಜೀವನದ ಮೌಲ್ಯಗಳನ್ನು ಒತ್ತುಕೊಟ್ಟು ಬೋಧಿಸುತ್ತಿದ್ದರು. ಈ ಜನ ತಾವು ಕೇಳಿದ ಕಥೆಗಳನ್ನು ಮಕ್ಕಳಿಗೆ ಹೇಳುತ್ತ ಅವರಲ್ಲಿ ಸಚ್ಚಾರಿತ್ರ್ಯ ರೂಪಿಸಲು ಪ್ರಯತ್ನಿಸುತ್ತಿದ್ದರು.

ತಾತನವರ ಜಮೀನುಗಳು ಬೇರೆ ಬೇರೆ ಊರುಗಳಲ್ಲಿ ಇದ್ದದ್ದರಿಂದ ವರ್ಷಕ್ಕೆ ನಾಲ್ಕೈದು ಸಲವಾದರೂ ಆ ಊರುಗಳಿಗೆ ಹೋಗಿ ಒಂದೆರಡು ದಿನ ಆತ್ಮೀಯರ ಮನೆಗಳಲ್ಲಿರುತ್ತಿದ್ದರು. ಅಲ್ಲಿದ್ದಾಗ ಆ ಊರುಗಳವರಿಗೂ ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರಲ್ಲದೆ ಈ ಮಹಾಕಾವ್ಯಗಳಲ್ಲಿ ಭಕ್ತಿ ಹುಟ್ಟುವಂತೆ ಮಾಡುತ್ತಿದ್ದರು. ‘ತಾತನವರು ಬಂದಿದ್ದಾರೆ, ಕಥೆ ಕೇಳಲಿಕ್ಕೆ ಹೋಗೋಣ, ಬರ್ರಿ’ ಎಂದು ಕರೆಯುತ್ತ ಜನ ಗುಂಪುಗುಂಪಾಗಿ ಬಂದು ಸೇರುತ್ತಿದ್ದರು.

ಸ್ನಾನದ ನಂತರ ಶುಚಿರ್ಭತರಾಗಿ, ಮಡಿಯನ್ನುಟ್ಟು ದೇವರ ಕಟ್ಟೆಯನ್ನೆರಿದರೆಂದರೆ ವಿವರವಾಗಿ ದೇವರ ಪೂಜೆ ಗೈದು ಮಾಧ್ಯಾಹ್ನಿಕವನ್ನೂ ಮುಗಿಸಿ ಕೆಳಗಿಳಿಯಲು ಕೊನೆಯ ಪಕ್ಷ ಎರಡು ತಾಸುಗಳಾದರೂ ಹಿಡಿಯುತ್ತಿತ್ತು. ಮಧ್ಯಾಹ್ನ ಭೋಜನದ ಬಳಿಕ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ನಂತರ ಹರಿಕಥಾಮೃತಸಾರ ಹಾಗೂ ಇತರ ಯಾವುದಾದರೂ ಗ್ರಂಥದ ಪಾರಾಯಣ ಮಾಡುತ್ತಿದ್ದರು. ತಾತನವರು ಸಂಸ್ಕೃತ ಪಂಡಿತರಾಗಿದ್ದರಲ್ಲದೆ ಕನ್ನಡಭಾಷೆಯಲ್ಲಿಯೂ ಪರಿಣತರಾಗಿದ್ದರು. ಲೌಕಿಕ ವಿಷಯಗಳಲ್ಲಿ ಆಸಕ್ತಿ ಇರದಿದ್ದರೂ ಜಹಗೀರದಾರ್ ಅಂದರೆ ಕಂದಾಯ ಇಲಾಖೆಯ ಅಧಿಕಾರವಿದ್ದದ್ದರಿಂದ ಅತ್ತಕಡೆ ಸ್ವಲ್ಪ ಸಮಯವನ್ನು ವಿನಿಯೋಗಿಸುವುದು ಅನಿವಾರ್ಯವಾಗಿತ್ತು. ದಿನದ ಹೆಚ್ಚಿನ ಸಮಯವನ್ನು ಅಧ್ಯಯನ, ಪಾರಾಯಣ ಹಾಗೂ ದೇವರ ನಾಮಗಳನ್ನು ಹೇಳುವುದರಲ್ಲಿಯೇ ಕಳೆಯುತ್ತಿದ್ದರು. ತಮ್ಮ ಮನೆಗೆ ಪಂಡಿತರು ಬಂದಾಗ ಅಥವಾ ತಾವು ಬೇರೆಡೆ ಹೋದಾಗ ಅಲ್ಲಿ ಭೇಟಿ ಆಗುತ್ತಿದ್ದ ಪಂಡಿತರೊಂದಿಗೆ ಮಧ್ವಸಿದ್ಧಾಂತ ಹಾಗೂ ದಾಸಸಾಹಿತ್ಯದ ಬಗ್ಗೆ ರ್ಚಚಿಸುತ್ತಿದ್ದರು.

ಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ ಇರದ, ಆದರೆ ಸಂಗೀತದ ಬಗ್ಗೆ ಒಲವುಳ್ಳ ತಮ್ಮ ಊರ ಜನರನ್ನು ಸೇರಿಸಿ ಪ್ರತಿದಿನ ಸಾಯಂಕಾಲ ಅವರಿಗೆ ದೇವರ ನಾಮಗಳನ್ನು ಕಲಿಸಿ ಶ್ರಾವಣ ಮಾಸದಲ್ಲಿ ಒಂದು ತಿಂಗಳು ಬೆಳಗಿನ ಜಾವದಲ್ಲಿ ಭಜನೆ ಮಾಡುತ್ತ ಗ್ರಾಮ ಪ್ರದಕ್ಷಿಣೆ ಮಾಡಲು ಅಣಿಗೊಳಿಸುತ್ತಿದ್ದರು. ಗ್ರಾಮದ ಜನ ತಮ್ಮ ಕೌಟುಂಬಿಕ ಕಲಹಗಳನ್ನು ತಾತನವರ ಮುಂದೆ ನಿವೇದಿಸಿಕೊಳ್ಳುತ್ತಿದ್ದರು. ಅವುಗಳನ್ನು ಬಗೆಹರಿಸಿ ಕುಟುಂಬಗಳಲ್ಲಿ ನೆಮ್ಮದಿ ನೆಲೆಸುವಂತೆ ಮಾಡುತ್ತಿದ್ದರು. ಅವರ ಮಾತಿನಲ್ಲಿ ಅಂತಹ ಪ್ರಭಾವ ಇತ್ತು.

ಊರಿನ ಜನ ಸಣ್ಣಪುಟ್ಟ ಕಾಯಿಲೆಗಳ ನಿವಾರಣೆಗೋಸ್ಕರ ತಾತನವರ ಮನೆಗೆ ಬರುತ್ತಿದ್ದರು. ಅವರು ರೋಗಿಗಳಿಗೆ ಸೇವಿಸಲು ಯಾವುದೇ ಔಷಧ ಕೊಡುತ್ತಿರಲಿಲ್ಲ. ದೇವರ ಮನೆಗೆ ಹೋಗಿ ಸ್ವಲ್ಪ ಮಂತ್ರಾಕ್ಷತೆಯನ್ನು ಒಂದು ಬಟ್ಟೆಯ ತುಂಡಿನಲ್ಲಿ ಕಟ್ಟಿ ಅದನ್ನು ಮಂತ್ರ ಪಠಿಸುತ್ತ ರೋಗಿಯ ತೋಳಿಗೆ ಕಟ್ಟುತ್ತಿದ್ದರು. ತಾತನವರಲ್ಲಿಯ ವಿಶ್ವಾಸದಿಂದ ಕಾಯಿಲೆಗಳು ವಾಸಿಯಾಗುತ್ತಿದ್ದವು.

ತಾತನವರಿಗೆ ಕಾಶಿಯಾತ್ರೆ ಮಾಡಬೇಕೆಂಬ ಪ್ರಬಲ ಇಚ್ಛೆಯಿತ್ತು. ಹತ್ತಿರದ ಹಳ್ಳಿಯ ಕುಟುಂಬವೊಂದು ಇವರಲ್ಲಿ ಬಹಳ ವಿಶ್ವಾಸವುಳ್ಳದ್ದಾಗಿತ್ತು. ಆ ಕುಟುಂಬದ ಮುಖ್ಯಸ್ಥರು, ‘ನೀವು ಹಿರಿಯರು, ನಮ್ಮೊಂದಿಗೆ ನೀವು ಯಾತ್ರೆಗೆ ಬರಬೇಕು. ನಿಮ್ಮ ಸನ್ನಿಧಿ ನಮಗೆ ಆಶೀರ್ವಾದವಿದ್ದಂತೆ’ ಎಂದು ಆಮಂತ್ರಣವಿತ್ತರು. ತಾತನವರು ದೇವರ ಕರುಣೆಯನ್ನು ಸ್ಮರಿಸುತ್ತ ಹೊರಡಲು ಉದ್ಯುಕ್ತರಾದರು. ಚಿಕ್ಕ ಮಕ್ಕಳನ್ನು ಮಾವನವರ ಮನೆಯಲ್ಲಿ ಬಿಟ್ಟು ಬಂದರು. ಊರಿಗೆ ಹೊರಡುವ ದಿನ ಉಳಿದೆಡೆ ಬೀಗ ಹಾಕಿ ದೇವರಮನೆಗೆ ಹೋಗಿ ನಮಸ್ಕರಿಸಿ ಹೊರಡುವ ಸಮಯದಲ್ಲಿ ಒಂದು ಧ್ವನಿ ಕೇಳಿಸಿತು. ‘ಪಾತ್ರರ ಸಂಗಡ ಯಾತ್ರೆಯ ಚರಿಸಿ ವಿಧಾತೃಪಿತನ ಗುಣ ಪೊಗಳುತಲಿರುವುದೆ ಫಲವಿದು ಬಾಳ್ದುದಕೆ’ ಎನ್ನುವ ದಾಸರ ಪದದ ನುಡಿ ಅದಾಗಿತ್ತು. ಅಚ್ಚರಿಯಿಂದ ಸುತ್ತಮುತ್ತೆಲ್ಲ ನೋಡಿದಾಗ ಯಾರೂ ಕಾಣಲಿಲ್ಲ. ಇದು ಭ್ರಮೆಯಾಗಿರಲಿಲ್ಲ. ಧ್ವನಿ ಸ್ಪಷ್ಟವಾಗಿಯೇ ಕೇಳಿಸಿತು. ಯಾವ ಅನುಮಾನವೂ ಇರಲಿಲ್ಲ. ಇದು ಅಶರೀರವಾಣಿಯೇ ಆಗಿತ್ತು. ತಾವು ದಿನವೂ ಬೆಳಗಿನ ಜಾವ ಯಾರ ತಂಬೂರಿಯನ್ನು ಮೀಟುತ್ತ ದೇವರ ನಾಮಗಳನ್ನು ಹೇಳುತ್ತಿದ್ದರೋ ಆ ಗುರುಶ್ರೀಶವಿಠ್ಠಲದಾಸರೇ ಕುಲದೈವ ಲಕ್ಷ್ಮೀನರಸಿಂಹನ ಪ್ರೇರಣೆಯಿಂದ ಕಾಶೀಯಾತ್ರೆ ಸುಖಕರವಾಗಲಿ ಎಂದು ಆಶೀರ್ವದಿಸಿ ಹೇಳಿದ ವಾಣಿ ಇದು ಎಂದು ಖಚಿತವಾಯಿತು. ಅಭಗವಂತನನ್ನು ಸ್ಮರಿಸುತ್ತ ಯಾತ್ರಾತಂಡವನ್ನು ಸೇರಿದರು. ‘ಪಾತ್ರರ ಸಂಗಡ ಯಾತ್ರೆಯ’ ಎನ್ನುವ ನುಡಿಯ ಅರ್ಥ ‘ಸಜ್ಜನರೊಂದಿಗೆ, ಜ್ಞಾನಿಗಳೊಂದಿಗೆ ಯಾತ್ರೆ ಮಾಡುವುದು ಶ್ರೇಯಸ್ಕರ’ ಎಂದು.

ತಮ್ಮ ಹೊಲದಲ್ಲಿಯ ಒಂದು ಗಿಡವನ್ನು ಅನಿವಾರ್ಯವಾಗಿ ಕಡಿಸುವ ಪ್ರಸಂಗ ಬಂದಿದ್ದರಿಂದ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ಕಡಿಸಲಾಯಿತು. ಇದು ಇಲಾಖೆಯ ಗಮನಕ್ಕೆ ಹೋದಾಗ ಅಧಿಕಾರಿಯೊಬ್ಬರು ವಿಚಾರಣೆಗಾಗಿ ತಾತನವರ ಮನೆಗೆ ಬಂದರು. ಅವರನ್ನು ಕೂಡಿಸಿಕೊಂಡು ತಾತನವರು ಮರ ಕಡಿದ ಆವಶ್ಯಕತೆಯ ಸಂದರ್ಭವನ್ನು ವಿವರಿಸಿದರಲ್ಲದೆ ಒಂದು ದಾಸರ ಪದವನ್ನು ಹೇಳಿ ಅದರಲ್ಲಿ ಬರುವ ಒಂದೆರಡು ಸಾಲುಗಳ (‘ಗಿಡ ಹಾಕಿದವ ಗಿಡದ ಬುಡ ಕಡಿವೆನೆನಲು ಕೈಹಿಡಿದು ನಿಲ್ಲಿಸುವರಾರು?’) ಅರ್ಥವನ್ನು ತಿಳಿಸಿದರು. ಅಧಿಕಾರಿಗೆ ಇದು ತುಂಬ ಹಿಡಿಸಿತು. ಇದು ಅಪರಾಧದಡಿ ಬರುವುದಿಲ್ಲ ಎಂದು ಮನವರಿಕೆಯಾದದ್ದರಿಂದ ಏನನ್ನೂ ದಾಖಲಿಸದೆ ಮರಳಿದರು.

ತಾತನವರ ಅವಸಾನ ಕಾಲ ಸಮೀಪಿಸಿತು. ಒಂದು ದಿನ ಮಧ್ಯಾಹ್ನ ಕಳೆದಿದೆ. ಅವರಿಗೆ ತಾವು ಹೊರಡುವ ಸಮಯ ಬಂತು ಎನಿಸಿದೆ. ಮಗ ಕೃಷ್ಣಾಚಾರ್ಯರನ್ನು ಕರೆದು ಹೀಗೆ ಹೇಳಿದರು, ‘ನಾಲ್ಕು ಜನ ನಾಮ ಮುದ್ರೆಗಳನ್ನು ಧರಿಸಿದ ವೈಷ್ಣವರು ನನ್ನ ಹತ್ತಿರ ಬಂದು ನಿಂತಿದ್ದಾರೆ. ‘‘ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ’’ ಎನ್ನುತ್ತಿದ್ದಾರೆ. ಕುಷ್ಟಗಿಯಲ್ಲಿರುವ ಇಬ್ಬರೂ ಹೆಣ್ಣುಮಕ್ಕಳಿಗೆ ವಿಷಯ ತಿಳಿಸಿ ಅವರು ಬೇಗನೆ ಹೊರಟು ಬರುವಂತೆ ವ್ಯವಸ್ಥೆ ಮಾಡು’ ಎಂದು. ಆದರೆ ಹೆಣ್ಣುಮಕ್ಕಳು ಅಂದು ಬರಲಾಗಲಿಲ್ಲ. ಮಾರನೆಯ ದಿನ ಬೆಳಗ್ಗೆ ಬರಲು ಸಾಧ್ಯವಾಯಿತು. ಸ್ವಲ್ಪ ಸಮಯದ ನಂತರ ತಾತನವರು ಕೊನೆಯುಸಿರೆಳೆದರು. ಅದು 1952ನೇ ಇಸ್ವಿ. ಅವರಲ್ಲಿ ಅತೀವ ವಿಶ್ವಾಸ ಉಳ್ಳ ಒಬ್ಬ ಗ್ರಾಮಸ್ಥ ಮುಂದೆ ಬಂದು, ‘ಇಂಥ ಮಹಾನುಭಾವರ ಅಂತ್ಯಸಂಸ್ಕಾರ ಬೇರೆಡೆ ಆಗುವುದು ಬೇಡ, ನನ್ನ ಹೊಲದಲ್ಲಿಯೇ ನಡೆಯಲಿ’ ಎಂದು ಬೇಡಿಕೊಂಡ. ಮತ್ತೊಬ್ಬ ವ್ಯಕ್ತಿ, ‘ನನ್ನ ಮನೆಯಲ್ಲಿರುವ ಕಟ್ಟಿಗೆಯನ್ನು ಒದಗಿಸುತ್ತೇನೆ’ ಎಂದು ಬಿನ್ನವಿಸಿದ. ಕತ್ತಲಾಗುವುದರೊಳಗೆ ಅಂತ್ಯಸಂಸ್ಕಾರ ನೆರವೇರಿತು.

ಶುದ್ಧ ಸಾತ್ವಿಕ ಜೀವನ ನಡೆಸಿದ ತಾತನವರು ಬಂದ ಕಾರ್ಯವನ್ನು ಪೂರೈಸಿ ಭಗವಂತನ ಪಾದವನ್ನು ಸೇರಿದರು. ಹೀಗೆ ಎತ್ತರದ ಅಧ್ಯಾತ್ಮ ಬಾಳನ್ನು ಬಾಳಿದ ಗುರುಭೀಮಾಚಾರ್ಯ ತಾತನವರು ಪ್ರಾತಃಸ್ಮರಣೀಯರಾಗಿದ್ದಾರೆ.

ಟಿ. ಗುರುರಾಜಾಚಾರ್ ಜಹಗೀರದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net