

ಬಾಳೆಹೊನ್ನೂರು: ಅಕ್ಷರನಗರದ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇಗುಲದ ಪರಿಸರವನ್ನು ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಮಾರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.
ಸಮೀಪದ ಅಕ್ಷರನಗರದ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇವಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ತೃತೀಯ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಭಾಪುರಿ ಪೀಠದ ಪುರಾತನ ಗಡಿಕಲ್ಲು ಇರುವ ಅಕ್ಷರನಗರದ ಗುಡ್ಡದ ತುದಿಯಲ್ಲಿ ಶ್ರೀ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇವಸ್ಥಾನ ಉದ್ಘಾಟನೆಗೊಂಡು ಮೂರು ವರ್ಷ ಪೂರ್ಣಗೊಂಡಿದ್ದು ಎಲ್ಲರ ಸಹಕಾರದಿಂದ ನಿರಂತರ ಪೂಜಾ ಕೈಂಕರ್ಯಗಳು ನೆರವೇರುತ್ತಿದೆ.
ದೇವಾಲಯ ನಿರ್ಮಾಣದ ಬಳಿಕ ಗ್ರಾಮಕ್ಕೆ ಒಳಿತಾಗಿದೆ ಎಂಬುದು ಭಕ್ತರ ನಂಬಿಕೆ. ಗ್ರಾಮಗಳಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಗಳು ನಡೆದರೆ ಉತ್ತಮ ಶ್ರೇಯಸ್ಸು ದೊರೆಯಲಿದ್ದು ಮುಂದಿನ ದಿನಗಳಲ್ಲಿ ಈ ಸ್ಥಳ ಧಾರ್ಮಿಕ, ಪ್ರವಾಸಿ ಕ್ಷೇತ್ರವಾಗಿ ಹೊರಹೊಮ್ಮಬೇಕು ಎಂಬುದು ಸಮಿತಿಯವರ ಆಶಯವಾಗಿದೆ. ವಾರ್ಷಿಕ ಪೂಜಾ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಒಗ್ಗೂಡಿಸಿ ಸಮಾನತೆ ಮೂಡಿಸಲಾಗುತ್ತಿದೆ ಎಂದರು.
ವಾರ್ಷಿಕ ಪೂಜೆಯ ಅಂಗವಾಗಿ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಕಲಾಹೋಮ, ಕಳಸಾಭಿಷೇಕ, ನಾಗದೇವರಿಗೆ ಸರ್ಪಕಲ್ಪ ಹೋಮ, ಪವಮಾನ ಅಭಿಷೇಕ, ಶ್ರೀ ಚೌಡಿಗೆ ಕಲಾಹೋಮ, ಕಳಸಾಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ನಾಗ ದೇವರಿಗೆ ಆಶ್ಲೇಷಬಲಿ, ಚಾಮುಂಡೇಶ್ವರಿ ಉತ್ಸವ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯಭಟ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು. ೆ.25ರಂದು ದೇವಾಲಯದಲ್ಲಿ ಚೌಡಿ ಹರಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ವಾರ್ಷಿಕ ಪೂಜಾ ಕಾರ್ಯದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಎಂ.ಎಸ್.ಅರುಣೇಶ್, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್, ದೇವಾಲಯದ ಕಾರ್ಯದರ್ಶಿ ವಿನೋದ್, ಖಜಾಂಚಿ ತಿಪ್ಪೇಶ್, ದೇವಸ್ಥಾನ ಸಮಿತಿಯ ಸದಸ್ಯರಾದ ಸಂದೀಪ್ ಶೆಟ್ಟಿ, ಎಂ.ಅರ್.ರವಿಗೌಡ, ನಾಗರಾಜ್, ಗುರು, ಶ್ರೀಧರ್ ಇತರರಿದ್ದರು.