ರೈ ಕುಟುಂಬದ ಗನ್‌ಮ್ಯಾನ್ ಸೆರೆ

Muttappa Rai
Published on

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡೇಟು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ರೈ ಕುಟುಂಬದ ಅಂಗರಕ್ಷಕ ಮಾನಪ್ಪ ವಿಠ್ಠಲ್ನನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ರಸ್ತೆ ಬಿಡದಿಯ ಕರಿಯಪ್ಪನದೊಡ್ಡಿ ಬಳಿ ಇರುವ ಮುತ್ತಪ್ಪ ರೈ ಅವರ ನಿವಾಸದ ಗೇಟ್ ಬಳಿಯ ಬಿಡದಿ- ಮುದವಾಡಿ ರಸ್ತೆಯಲ್ಲಿ ರಿಕ್ಕಿ ರೈ ಸಂಚರಿಸುತ್ತಗಿದ್ದ ಕಾರಿನ ಮೇಲೆ ಏ.19ರ ತಡರಾತ್ರಿ ಎರಡು ಸುತ್ತು ಫೈರಿಂಗ್ ನಡೆದಿತ್ತು. ಈ ವೇಳೆ ರಿಕ್ಕಿ ರೈ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ ಬಸವರಾಜು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಬಲವಾದ ಸಾಕ್ಷಾೃಧಾರಗಳ ಮೇರೆಗೆ ಮಾನಪ್ಪ ವಿಠ್ಠಲ್‌ನನ್ನು ಬಂಧಿಸಿ ಗುರುವಾರ ಸಂಜೆ ರಾಮನಗರದ ಸಿಜೆಎಂ ಕೋರ್ಟ್ ನ್ಯಾಯಾಧೀಶರಾದ ಮಹೇಶ್ ಮುಂದೆ ಹಾಜರುಪಡಿಸಿ 14 ದಿನಗಳ ಕಾಲ ಕಸ್ಟಡಿಗೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಎಂಆರ್ ಕುಟುಂಬಕ್ಕೆ ಲಾಯಲ್:

ಕೊಡಗು ಮೂಲದ ಮಾನಪ್ಪ ವಿಠ್ಠಲ್, ಮೃತ ಮುತ್ತಪ್ಪ ರೈ ಕುಟುಂಬಕ್ಕೆ ಲಾಯಲ್ ಆಗಿದ್ದ. 1992ರಲ್ಲಿ ಉಡುಪಿಯಲ್ಲಿ ಡಿಸಿಲ್ವಾ ಎಂಬಾತನ್ನು ಹತ್ಯೆ ಮಾಡಿ ಎರಡೂವರೆ ವರ್ಷ ಜೈಲಿನಲ್ಲಿದ್ದ. ಮುತ್ತಪ್ಪ ರೈ ಸೂಚನೆ ಮೇರೆಗೆ ಈ ಕೊಲೆ ಮಾಡಿದ್ದ ಎನ್ನಲಾಗಿತ್ತು. ಕೊನೆಗೆ ಸಾಕ್ಷಾೃಧಾರಗಳ ಕೊರತೆ ಮೇರೆಗೆ ಕೇಸಿನಿಂದ ಖುಲಾಸೆಯಾಗಿದ್ದ. ಆನಂತರ ರೈಗೆ ಅಂಗರಕ್ಷಕನಾಗಿದ್ದ. ವಿಠ್ಠಲ್ ಕುಟುಂಬಕ್ಕೆ ಮುತ್ತಪ್ಪ ರೈ ಸಹ ಸಾಕಷ್ಟು ಸಹಾಯ ಮಾಡಿ ಬಿಡದಿಯಲ್ಲಿ ವಿಲ್ಲಾ ಕೊಟ್ಟು ಜತೆಗೆ ಇರಿಸಿಕೊಂಡಿದ್ದ. ರೈ ಸಾವನ್ನಪ್ಪಿದ ಮೇಲೆ ಮಕ್ಕಳಿಗೆ ಗನ್‌ಮ್ಯಾನ್ ಆಗಿ ಸೇವೆ ಮುಂದುವರಿಸಿದ್ದ.

ರಾಜಕೀಯ ಪಿತೂರಿಗೆ ಸುಳ್ಳು ಆರೋಪ :

ರಿಕ್ಕಿ ರೈ ಮೇಲಿನ ಗುಂಡೇಟು ಪ್ರಕರಣದ ಮೊದಲ ಆರೋಪಿ ರಾಕೇಶ್ ಮಲ್ಲಿ, ಗುರುವಾರ ಸಹ ವಿಚಾರಣೆಗೆ ಹಾಜರಾಗಿದ್ದ. ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಅವರೇ ಖುದ್ದು ವಿಚಾರಣೆ ನಡೆಸಿದ್ದಾರೆ. ಆನಂತರ ಸುದ್ದಿಗಾರರ ಜತೆ ಮಾತನಾಡಿರುವ ರಾಕೇಶ್ ಮಲ್ಲಿ, ಈ ಕೇಸಿಗೂ ನನಗೂ ಯಾವುದೇ ಸಂಭಂಧವಿಲ್ಲ. ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ 2ನೇ ಬಾರಿ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ರಿಕ್ಕಿ ರೈ, ರಾಕೇಶ್ ರೈ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ನನ್ನ ರಾಜಕೀಯ ಭವಿಷ್ಯ ಹಾಳು ಮಾಡಲು ಯತ್ನ ನಡೆದಿದೆ. ಮುತ್ತಪ್ಪ ರೈಗೂ ನನಗೂ ಈ ಹಿಂದೆ ವೈಮನಸ್ಸು ಇದ್ದಿದ್ದು ನಿಜ. ಅದು ಆಗಲೇ ಮುಗಿದು ಹೋಗಿದೆ. ಅವರ ಮಕ್ಕಳಿಗೂ, ನನಗೂ ಯಾವ ವ್ಯವಹಾರವೂ ಇಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೆನೆ ಎಂದು ರಾಕೇಶ್ ಮಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net