ಸಂವಿಧಾನ ಆಶಯ ಬಲಗೊಳ್ಳಲಿ

26-GPT-5
Published on

ಗುಂಡ್ಲುಪೇಟೆ: ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಂವಿಧಾನ ಪಾಲನೆ ಮಾಡಲಾಗುತ್ತಿದ್ದು, ಅದರ ಆಶಯಗಳನ್ನು ಬಲಪಡಿಸಬೇಕಾಗಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ದೇಶದಲ್ಲಿ ಅಳವಡಿಕೆ ಮಾಡಿದಾಗಿನಿಂದಲೂ ಸರ್ವ ಜನಾಂಗವನ್ನು ಸಮನಾಗಿ ಕಾಣಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಎಲ್ಲರಿಗೂ ತಲುಪಿಸುವಂತೆ ಮಾಡಲು ರಾಜ್ಯ ಸರ್ಕಾರ ಸಂವಿಧಾನ ದಿನಾಚಣೆ ಮಾಡುತ್ತಿದೆ. ಆದ್ದರಿಂದ ಎಲ್ಲರೂ ಸಂವಿಧಾನವನ್ನು ಪಾಲಿಸುವ ಮೂಲಕ ಶಾಂತಿಯುತ ಬಾಳ್ವಿಕೆ ನಡೆಸುವಂತಾಗಬೇಕು ಎಂದು ಹೇಳಿದರು.

ತಹಸೀಲ್ದಾರ್ ರಮೇಶ್ ಬಾಬು, ಮುಖ್ಯಭಾಷಣಕಾರ ಮಹೇಶ್‌ಚಂದ್ರಗುರು ಮಾತನಾಡಿದರು. ಇದಕ್ಕೂ ಮೊದಲು ಡಾ.ಅಂಬೇಡ್ಕರ್ ಹಾಗೂ ಭಾರತಾಂಬೆಯ ಭಾವಚಿತ್ರಗಳನ್ನು ವಾಹನದ ಮೇಲಿರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಾನಾ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೊಲೀಸರು ಆಕರ್ಷಕ ಪಥ ಸಂಚಲನ ನಡೆಸಿದರು. ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ಬಿಇಒ ರಾಜಶೇಖರ್, ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಸದಸ್ಯರಾದ ಅಣ್ಣಯ್ಯಸ್ವಾಮಿ, ಕುಮಾರ್ ಸೇರಿದಂತೆ ಹಲವರು ಇದ್ದರು.

ಮುಂದುವರೆದ ಅವ್ಯವಸ್ಥೆ
ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದಲೇ ಆಗಮಿಸಿದ ವಿದ್ಯಾರ್ಥಿಗಳಿಗೆ ಕ್ರೀಡಾಂಗಣದಲ್ಲಿ ಕುಡಿಯುವ ನೀರು ಹಾಗೂ ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ ಮಾಡದ ಪರಿಣಾಮ ಸುಮಾರು 4 ಗಂಟೆಗಳ ಕಾಲ ಮಕ್ಕಳು ಮಣ್ಣಿನ ನೆಲದ ಮೇಲೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕಾಯಿತು. ಗ್ರಾಮಾಂತರ ಪ್ರದೇಶಗಳಿಂದ ಬಂದಿದ್ದ ಮಕ್ಕಳು ಹಸಿವಿನಿಂದ ಬಳಲಿದರು. ಕಾರ್ಯಕ್ರಮ ನಡೆಯುವಾಗ ಏರುತ್ತಿದ್ದ ಬಿಸಿಲ ತಾಪ ತಾಳಲಾರದೆ ಮಕ್ಕಳು ಕ್ರೀಡಾಂಗಣದ ನೆರಳಿನತ್ತ ತೆರಳಿದರು. ದಾಹ ತಣಿಸಲು ಐಸ್‌ಕ್ರೀಂ ಮೊರೆಹೋದರು. ಇಂತಹ ಕಾರ್ಯಕ್ರಮಕ್ಕೆ ಆಗಮಿಸುವ ಮಕ್ಕಳಿಗೆ ನೀರು ನೆರಳಿನ ವ್ಯವಸ್ಥೆ ಮಾಡದ ತಾಲೂಕು ಆಡಳಿತದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net