ಗುಜರಾತಿನಲ್ಲಿ ನಾಪತ್ತೆ… 11 ವರ್ಷದ ಬಳಿಕ ಕೋಲ್ಕತದಲ್ಲಿ ಕೋಮಾದಿಂದ ಎಚ್ಚರಗೊಂಡ ಮಹಿಳೆ!

Gujrat Woman
Published on

ಅಹಮದಾಬಾದ್​: ಗುಜರಾತಿನ ಗೋದ್ರಾ ಜಿಲ್ಲೆಯ ಪಂಚಮಹಲ್‌ನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ಬರೋಬ್ಬರಿ 11 ವರ್ಷಗಳ ಬಳಿಕ ಕೋಲ್ಕತದಲ್ಲಿ ಕೋಮಾದಿಂದ ಎಚ್ಚರಗೊಂಡಿರುವ ಅಚ್ಚರಿ ಪ್ರಕರಣ ವರದಿಯಾಗಿದೆ. ಪೊಲೀಸರ ನೆರವಿನಿಂದ ಗೋಧ್ರಾದ ಭಾಮೈಯ್ಯ ಎಂಬ ಹಳ್ಳಿಯಲ್ಲಿ ನೆಲೆಸಿರುವ ತನ್ನ ಕುಟುಂಬವನ್ನು ಮರು ಸೇರುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾಳೆ.

ಗೀತಾ ಬರಿಯಾ ಎಂಬಾಕೆ 2013ರಲ್ಲಿ ಕಣ್ಮರೆಯಾಗಿದ್ದರು. ಸಾಕಷ್ಟು ಹುಡುಕಾಟ ನಡೆಸಿದ ಕುಟುಂಬ, ಕಾಲಾನಂತರದಲ್ಲಿ ಆಕೆಯ ಮರಳುತ್ತಾಳೆ ಎಂಬ ಭರವಸೆಯನ್ನೇ ಕಳೆದುಕೊಂಡಿತು. ಮೃತಪಟ್ಟಿರಬಹುದೆಂದು ಭಾವಿಸಿತ್ತು. ಹೀಗಿರುವಾಗ ಇತ್ತೀಚೆಗಷ್ಟೇ ಗೀತಾ ಬರಿಯಾ ಕುಟುಂಬ ಕೋಲ್ಕತ್ತಾದ ಮಾನಸಿಕ ಆರೋಗ್ಯ ಸಂಸ್ಥೆಯ ಕರೆ ಸ್ವೀಕರಿಸಿತ್ತು. ಆಕೆ ಕೋಮಾ ಸ್ಥಿತಿಯಿಂದ ಸಹಜ ಜೀವನಕ್ಕೆ ಮರಳಿದ್ದಾಳೆ ಎಂಬ ವಿಚಾರ ಕೇಳಿ ಇಡೀ ಕುಟುಂಬ ಸಂತಸಗೊಂಡಿದೆ.

ಗೀತಾಳ ಕುಟುಂಬಕ್ಕೆ ಕೋಲ್ಕತ್ತಾಗೆ ಪ್ರಯಾಣಿಸಲು ಮತ್ತು ಭಾಮೈಯ್ಯಗೆ ಕರೆತರಲು ಪಂಚಮಹಲ್ ಜಿಲ್ಲಾ ಪೋಲೀಸರು ನೆರವು ನೀಡಿದ್ದಾರೆ. ಭಾಮೈಯ್ಯನಲ್ಲಿ ಗೀತಾರ ಮಕ್ಕಳು ಮತ್ತು ದೊಡ್ಡ ಕುಟುಂಬ ವಾಸಿಸುತ್ತಿದೆ.

ಇನ್ಸ್‌ಪೆಕ್ಟರ್ ಪ್ರವೀಣ್ ಅಶೋಕ ಮಾತನಾಡಿ, ಗೀತಾ ಕುಟುಂಬವು ಗುರುವಾರ ಕೋಲ್ಕತ್ತಾಗೆ ರೈಲಿನಲ್ಲಿ ಪ್ರಯಾಣಿಸಲಿದೆ. ಪಂಚಮಹಲ್​ ಜಿಲ್ಲಾಡಳಿತವು ಮಾನವೀಯತೆ ಆಧಾರದ ಮೇಲೆ ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದೆ. ಒಮ್ಮೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಗೀತಾ ಬರಿಯಾಳನ್ನು ಅವರ ಕುಟುಂಬ ಗ್ರಾಮಕ್ಕೆ ಕರೆತರುತ್ತದೆ ಎಂದಿದ್ದಾರೆ.

ಫೆ. 10 ರಂದು ಕೋಲ್ಕತ್ತದ ಪಾವ್ಲೋವ್ ಇನ್‌ಸ್ಟಿಟ್ಯೂಟ್‌ನ ವೈದ್ಯರು, ಪಂಚಮಹಲ್ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ಗೀತಾಗೆ ಪ್ರಜ್ಞೆ ಬಂದಿರುವುದಾಗಿ ಮತ್ತು ಅವರ ಕುಟುಂಬದ ವಿವರಗಳನ್ನು ಹಂಚಿಕೊಂಡರು. ಬಳಿಕ ಪೊಲೀಸರ ಸಹಾಯದಿಂದ ವೈದ್ಯರು ಗೀತಾಳ ಗ್ರಾಮ ಮತ್ತು ಕುಟುಂಬದ ವಿವರಗಳನ್ನು ಪರಿಶೀಲಿಸಿತು. ಕುಟುಂಬದವರನ್ನು ಸಂಪರ್ಕಿಸಿದ ಬಳಿಕ ವೈದ್ಯರು ಗೀತಾ ಮತ್ತು ಅವರ ಕುಟುಂಬದೊಂದಿಗೆ ವಿಡಿಯೋ ಕರೆಯನ್ನು ಏರ್ಪಡಿಸಿದರು. ಅಂತಿಮವಾಗಿ ಗೀತಾ, 11 ವರ್ಷಗಳ ವನವಾಸದ ಬಳಿಕ ಮರಳಿ ಕುಟುಂಬವನ್ನು ಸೇರಿದ್ದಾರೆ. 2013ರಲ್ಲಿ ಕುಟುಂಬದ ವಿವಾಹ ಸಮಾರಂಭವೊಂದರಲ್ಲಿ ಗೀತಾ ನಾಪತ್ತೆಯಾಗಿದ್ದರು. ಆಕೆ ಕೋಲ್ಕತ್ತ ತಲುಪಿದ್ದು ಹೇಗೆ ಮತ್ತು 11 ವರ್ಷಗಳಲ್ಲಿ ಆಕೆಯ ಅನುಭವ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಗೀತಾಗೆ ಮೂವರು ಮಕ್ಕಳಿದ್ದಾರೆ: ಗೀತಾಗೆ ಇಬ್ಬರು ಗಂಡು ಮತ್ತು ಓರ್ವ ಮಗಳಿದ್ದಾಳೆ. ಗೀತಾ ನಾಪತ್ತೆಯಾದಾಗ ಮಕ್ಕಳಿನ್ನೂ ಚಿಕ್ಕವರು. ಹೀಗಾಗಿ ತಾಯಿಯ ನೆನಪುಗಳಿಲ್ಲ. ಇನ್ನೊಂದೆಡೆ ಕಳಪೆ ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಲೆಯನ್ನು ತೊರೆದಿರುವ ಮಕ್ಕಳಿಗೆ ಸರಿಯಾದ ಶಿಕ್ಷಣ ಸಹ ಸಿಕ್ಕಿಲ್ಲ. ಗೀತಾ ಅವರ ಪತಿ ಕೆಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net