ದೇಶದಲ್ಲಿ ಸ್ಟಾರ್ಟಪ್​ಗೆ ಗುಜರಾತ್, ಕರ್ನಾಟಕ ಅತ್ಯುತ್ತಮ..

Startups
Published on

ನವದೆಹಲಿ: ದೇಶದಲ್ಲಿ ಗುಜರಾತ್ ಮತ್ತು ಕರ್ನಾಟಕ ಸ್ಟಾರ್ಟಪ್​ಗಳಿಗೆ ಉತ್ತಮ ಪರಿಸರ ಇರುವ ರಾಜ್ಯಗಳಾಗಿವೆ. ಅತ್ಯುತ್ತಮ ಪರ್ಫಾಮರ್ಸ್ ಪಟ್ಟಿಯಲ್ಲಿ ಸತತ ಮೂರನೇ ಸಾರಿ ಗುಜರಾತ್ ಮೊದಲ ಸ್ಥಾನದಲ್ಲಿ ಇದೆ. ಒಂದು ಕೋಟಿಗಿಂತ ಕಡಿಮೆ ಜನರು ಇರುವ ರಾಜ್ಯಗಳ ಪೈಕಿ ಮೇಘಾಲಯ ಅತ್ಯುತ್ತಮ ರಾಜ್ಯವಾಗಿದೆ.

ಸ್ಟಾರ್ಟಪ್ ಆರಂಭಿಸುವವರಿಗೆ ದೊರೆಯುವ ಉತ್ತೇಜನ, ಕಲ್ಪಿಸಿರುವ ಸೌಲಭ್ಯ, ರಾಜ್ಯ ಸರ್ಕಾರದ ಬೆಂಬಲವನ್ನು ಪರಿಗಣಿಸಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 2021ನೇ ಸಾಲಿನ ರ‍್ಯಾಂಕಿಂಗ್ ಅನ್ನು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಸಿದ್ಧಪಡಿಸಿದೆ. 24 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಐದು ಗುಂಪಿನಲ್ಲಿ ವರ್ಗೀಕರಿಸಲಾಗಿದ್ದು, ಅತ್ಯುತ್ತಮ ಸಾಧನೆ, ಉನ್ನತ ಸಾಧನೆ, ಲೀಡರ್ಸ್, ಆಸ್ಪೈರಿಂಗ್ ಲೀಡರ್ಸ್ ಮತ್ತು ಉದಯೋನ್ಮುಖ ಆರಂಭಿಕ ವ್ಯವಸ್ಥೆಗಳಿರುವ ರಾಜ್ಯಗಳೆಂದು ಮತ್ತು ಜನಸಂಖ್ಯೆ ಆಧಾರದಲ್ಲೂ ಐದು ಭಾಗದಲ್ಲಿ ವಿಂಗಡಿಸಿ ಈ ರ‍್ಯಾಂಕಿಂಗ್ ನೀಡಿದೆ.

ಕೇರಳ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಜಮ್ಮು-ಕಾಶ್ಮೀರಗಳು ಉನ್ನತ ಫರ್ಪಾಮರ್ಸ್ ಪಟ್ಟಿಯಲ್ಲಿದ್ದರೆ, ಪಂಜಾಬ್, ತಮಿಳುನಾಡು, ಉತ್ತರಾಖಂಡ ಉತ್ತರ ಪ್ರದೇಶ, ಅಂಡಮಾನ್-ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಗೋವಾ ಲೀಡರ್ಸ್ ವರ್ಗೀಕರಣದಲ್ಲಿ ಗುರುತಿಸಲ್ಪಟ್ಟಿವೆ. ಆಸ್ಪೈರಿಂಗ್ ಲೀಡರ್ಸ್ ಪಟ್ಟಿಯಲ್ಲಿ ಛತ್ತೀಸ್​ಗಢ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಚಂಡೀಗಢ ಪುದುಚೇರಿ ಮತ್ತು ನಾಗಾಲ್ಯಾಂಡ್​ಗಳಿವೆ. ಉದಯೋನ್ಮುಖ ಆರಂಭಿಕ ವ್ಯವಸ್ಥೆಗಳಿರುವ ರಾಜ್ಯಗಳೆಂದು ಆಂಧ್ರಪ್ರದೇಶ, ಬಿಹಾರ, ಮಿಜೋರಾಂ, ಲಡಾಖ್​ಗಳನ್ನು ಪರಿಗಣಿಸಲಾಗಿದೆ.

ಸ್ಟಾರ್ಟಪ್​ಗಳ ಪ್ರಗತಿಗೆ ಸಹಕಾರಿ: ಈ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಸ್ಟಾರ್ಟಪ್​ಗಳ ಪ್ರಗತಿಗೆ ಈ ರೀತಿ ರ‍್ಯಾಂಕಿಂಗ್ ನೀಡುವುದು ಸಹಕಾರಿ ಆಗಿದೆ. ರಾಜ್ಯಗಳು ತಮ್ಮಲ್ಲಿರುವ ಉತ್ತಮ ಅಂಶಗಳನ್ನು ಇತರ ರಾಜ್ಯಗಳ ಜತೆ ಹಂಚಿಕೊಳ್ಳಬೇಕು. ಈ ರೀತಿಯ ಸ್ಪರ್ಧೆಯನ್ನು ಜಿಲ್ಲಾಮಟ್ಟದಲ್ಲೂ ಕಾಣುವಂತಾಗಬೇಕು ಎಂದು ಆಶಿಸಿದರು. ಸ್ಟಾರ್ಟಪ್​ಗಳಿಗೆ ಫಂಡ್ ಆಫ್ ಫಂಡ್ಸ್, ಸೀಡ್ ಫಂಡ್ ಯೋಜನೆಗಳ ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ. ಮೂರು ವರ್ಷ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇನ್ನಿತರ ತೆರಿಗೆ ಸಮಸ್ಯೆಯನ್ನು ಸರ್ಕಾರ ಬಗೆಹರಿಸುತ್ತಿದೆ ಎಂದರು. ಮುಂದಿನ ಐದು ವರ್ಷಗಳಲ್ಲಿ ಇ-ಕಾಮರ್ಸ್ ವಲಯದ ವ್ಯವಸ್ಥೆ ಹೆಚ್ಚು ಪ್ರಜಾಸತಾತ್ಮಕವಾಗಲಿದೆ. ಮೂರು ಕಂಪನಿಗಳು ಸಹಸ್ರಕೋಟಿ ಅಥವಾ ಲಕ್ಷ ಕೋಟಿ ಡಾಲರ್ ಬಂಡವಾಳದ ಸಂಸ್ಥೆಗಳಾಗುವ ಬದಲಿಗೆ ಸಾವಿರ ಕಂಪನಿಗಳು ಶತಕೋಟಿ ಡಾಲರ್​ಗಳ ಕಂಪನಿಗಳಾಗುತ್ತವೆ ಎಂದು ಹೇಳಿದರು.

ಮಾನದಂಡ ಏನು?: ಸಾಂಸ್ಥಿಕ ಬೆಂಬಲ, ನವೀನತೆಗೆ ಉತ್ತೇಜನ, ಮಾರುಕಟ್ಟೆಯ ಲಭ್ಯತೆ, ಉತ್ತೇಜನ, ಹಣಕಾಸು ನೆರವು ಸೇರಿ ಇಪ್ಪತ್ತಾರು ಕ್ರಿಯಾ ಅಂಶಗಳನ್ನು ಏಳು ಬಗೆಯ ಸುಧಾರಣಾ ಕ್ರಮಗಳ ಮೂಲಕ ಜಾರಿ ಮಾಡಿದನ್ನು ಮಾನದಂಡವಾಗಿ ಪರಿಗಣಿಸಲಾಗಿದೆ.

ಸದೃಢ ಕಾರ್ಯಪರಿಸರ ಅಭಿವೃದ್ಧಿ

ಬೆಂಗಳೂರು: ಸ್ಟಾರ್ಟಪ್​ಗಳ ನೆಚ್ಚಿನ ತಾಣವಾಗಿರುವ ಕರ್ನಾಟಕವು ಕೈಗಾರಿಕಾ ಮತ್ತು ಆಂತರಿಕ ವಹಿವಾಟು ಉತ್ತೇಜನಾ ಇಲಾಖೆ (ಡಿಪಿಐಐಟಿ)ಯ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸ್ಟಾರ್ಟ್ ಅಪ್ ರ್ಯಾಂಕಿಂಗ್-2021 ರಲ್ಲಿ ಅತ್ಯುತ್ತಮ ಸಾಧಕ ಪುರಸ್ಕಾರಕ್ಕೆ ಪಾತ್ರವಾಗಿದೆ. ಈ ವಿಷಯ ತಿಳಿಸಿರುವ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಸದೃಢವಾದ ಸ್ಟಾರ್ಟಪ್ ಕಾರ್ಯಪರಿಸರ ಅಭಿವೃದ್ಧಿಪಡಿಸಿರುವುದಕ್ಕಾಗಿ ರಾಜ್ಯಕ್ಕೆ ಈ ಪ್ರಶಸ್ತಿ ಕೊಡಲಾಗಿದೆ ಎಂದಿದ್ದಾರೆ. ಡಿ.ಪಿ.ಐ.ಐ.ಟಿ. ರಾಜ್ಯವನ್ನು ಸಾಂಸ್ಥಿಕ ಚಾಂಪಿಯನ್, ಆವಿಷ್ಕಾರದ ನಾಯಕ, ಮುಂಚೂಣಿ ಸಂಗ್ರಾಹಕ, ಸಾಮರ್ಥ್ಯ ವೃದ್ಧಿಯಲ್ಲಿ ರೂವಾರಿ ಎಂದು ಹಾಗೂ ನಿಧಿ ನೀಡಿಕೆಯಲ್ಲಿ ಅಗ್ರ ಪ್ರವರ್ತಕ ಎಂದು ಪರಿಗಣಿಸಿದೆ ಎಂದು ವಿವರಿಸಿದ್ದಾರೆ. ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಹಾಗೂ ನಿರ್ದೇಶಕಿ ಮೀನಾ ನಾಗರಾಜ್ ಅವರು ರಾಜ್ಯದ ಸ್ಟಾರ್ಟಪ್ ಚಾಂಪಿಯನ್ಸ್ ಪ್ರಶಸ್ತಿಗೆ ಪಾತ್ರವಾಗಿದ್ದಾರೆ. ಸರ್ಕಾರದ ಪರವಾಗಿ ಇಲಾಖೆಯ ಉನ್ನತ ಅಧಿಕಾರಿಗಳು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಡಾ.ಇ.ವಿ. ರಮಣರೆಡ್ಡಿ, ಮೀನಾ ನಾಗರಾಜ್, ಚಂಪಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net