ಇದು ಕಾಂಗ್ರೆಸ್​ನ ಸ್ಟಿಂಗ್​ ಆಪರೇಶನ್​...; ಅಮಿತ್​ ಷಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Amit Shah
Published on

ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ ಎಂಎಲ್​​ಎ ಸೋಮಭಾಯ್ ಗಂಧಭಾಯ್ ಪಟೇಲ್​​ ಅವರು ಬಿಜೆಪಿಯಿಂದ 5 ಕೋಟಿ ರೂ.ಪಡೆದಿದ್ದಾರೆ ಎಂದು ಗುಜರಾತ್​ ಕಾಂಗ್ರೆಸ್​ ಯುನಿಟ್​ ಪ್ರತಿಪಾದಿಸಿದೆ. ಬಿಜೆಪಿಯಿಂದ ಹಣ ಪಡೆದೇ ಸೋಮಾ ಪಟೇಲ್​ ಪಕ್ಷ ಬಿಟ್ಟಿದ್ದಾಗಿ ನಾವು ನಡೆಸಿದ ಸ್ಟಿಂಗ್​ ಆಪರೇಶನ್​ನಿಂದ ಗೊತ್ತಾಗಿದೆ ಎಂದು ಕಾಂಗ್ರೆಸ್​ನ ಗುಜರಾತ್ ಘಟಕ ತಿಳಿಸಿದೆ.

ನವೆಂಬರ್​ 3ರಂದು ಗುಜರಾತ್​ನ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ನವೆಂಬರ್​ 1ರ ಸಂಜೆ 5ಗಂಟೆ ಹೊತ್ತಿಗೆ ಪ್ರಚಾರ ಮುಕ್ತಾಯವಾಗಿದೆ. ಇದೇ ಹೊತ್ತಲ್ಲಿ ಗುಜರಾತ್​ ಕಾಂಗ್ರೆಸ್​ ನೀಡಿದ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಗುಜರಾತ್ ಕಾಂಗ್ರೆಸ್​ ತನ್ನ ಸ್ಟಿಂಗ್ ಆಪರೇಶನ್​​ನ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಕಾಂಗ್ರೆಸ್ ಮಾಜಿ ಎಂಎಲ್​ಎ ಸೋಮಭಾಯ್ ಗಂಧಭಾಯ್ ಪಟೇಲ್​ ತಮ್ಮ ರಾಜೀನಾಮೆಗೆ ಕಾರಣವನ್ನು ಬಿಚ್ಚಿಟ್ಟಿದ್ದನ್ನು ನೋಡಬಹುದು. ಓರ್ವ ಎಂಎಲ್​ಎ ಕಾರಣವೇ ಇಲ್ಲದೆ ಯಾಕೆ ರಾಜೀನಾಮೆ ನೀಡುತ್ತಾನೆ. ನಾನೂ ಸಹ ಬಿಜೆಪಿಯಿಂದ 5 ಕೋಟಿ ರೂ. ಪಡೆದು ಕಾಂಗ್ರೆಸ್​ಗೆ ರಿಸೈನ್​ ಮಾಡಿದ್ದೇನೆ ಎಂದು ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಗುಜರಾತ್​​ನ ಸುರೇಂದ್ರನಗರದ ಮಾಜಿ ಶಾಸಕ ಸೋಮಾಭಾಯ್​ ಗಂಧಭಾಯಿ ಪಟೇಲ್​ ಅವರು ಹಣ ತೆಗೆದುಕೊಂಡು ಬಿಜೆಪಿಗೆ ಹೋಗಿದ್ದು ಈ ವಿಡಿಯೋದಿಂದ ಗೊತ್ತಾಗಿದೆ.

ಬಿಜೆಪಿಯವರು ಯಾವ ಶಾಸಕರಿಗೂ 10 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನೀಡಿಲ್ಲ ಎಂದು ಹೇಳಿದ್ದಾರೆ. ಕೆಲವರಿಗೆ ಹಣ ನೀಡಿದ್ದಾರೆ. ಮತ್ತೆ ಕೆಲವರಿಗೆ ಸ್ಪರ್ಧಿಸಲು ಟಿಕೆಟ್​ ಕೊಟ್ಟಿದ್ದಾರೆ ಸೋಮಾಭಾಯಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಇದೇ ವಿಡಿಯೋ ಇಟ್ಟುಕೊಂಡು ಕಾಂಗ್ರೆಸ್​ ನಾಯಕರು ಬಿಜೆಪಿ ವಿರುದ್ಧ ಸಿಕ್ಕಾಪಟೆ ಹರಿಹಾಯ್ದಿದ್ದಾರೆ. ಬಿಜೆಪಿ ಶಾಸಕರನ್ನು ಮಾರಾಟ ಮಾಡುವ, ಖರೀದಿಸುವ ಕೆಲಸದಲ್ಲಿ ತೊಡಗಿದೆ. ಅದಕ್ಕೆ ತನ್ನ ಭ್ರಷ್ಟಾಚಾರದ ಹಣವನ್ನು ಬಳಸಿಕೊಳ್ಳುತ್ತಿದೆ ಎಂದು ಗುಜರಾತ್​ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಮಿತ್​ ಚಾವಡಾ ಆರೋಪಿಸಿದ್ದಾರೆ.

ಸೋಮಾ ಪಟೇಲ್​ ಅವರು ವಿಡಿಯೋದಲ್ಲಿ ಅಮಿತ್​ ಷಾ, ಮುಖ್ಯಮಂತ್ರಿ ವಿಜಯ್​ ರೂಪಾಣಿ ಮತ್ತು ಸಂಸದ ಸಿ.ಆರ್​.ಪಾಟೀಲ್​ ಅವರ ಹೆಸರನ್ನು ಉಲ್ಲೇಖಿಸಿದ್ದು, ಈ ಮೂವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮಿತ್​ ಚಾವಡಾ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net