

ಬೆಂಗಳೂರು: ಅಲ್ ಕೈದಾ (Al Qaeda) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಸಮಾ ಪರ್ವೀನ್ ಎಂಬಾಕೆಯನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು 30 ವರ್ಷದ ಶಮಾ ಪರ್ವೀನ್ ಎಂದು ಗುರುತಿಸಲಾಗಿದೆ, ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಅಲ್-ಖೈದಾ (AQIS) ಸಂಯೋಜಿತ ಭಯೋತ್ಪಾದಕ ಘಟಕದ ನಂಟು ಹೊಂದಿದ್ದಾಳೆ ಎನ್ನುವ ಆರೋಪ ಇದೆ.
ಅಲ್ ಕೈದಾ ಜೊತೆ ನಂಟು ಹೊಂದಿರುವ ನಾಲ್ವರನ್ನು ಈ ಹಿಂದೆ ಗುಜರಾತ್ ಎಟಿಎಸ್ ಬಂಧಿಸಿತ್ತು. ಈ ನಾಲ್ವರೂ ಅಲ್ ಕೈದಾ ಜತೆ ಸಂಪರ್ಕ ಹೊಂದಿದ್ದರು. ಈ ಭಯೋತ್ಪಾದಕರು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಷಯವನ್ನು ಹಂಚಿಕೊಳ್ಳುತ್ತಿದ್ದರು. ಅವರು ‘ಘಜ್ವಾ-ಎ-ಹಿಂದ್’ ಬಗ್ಗೆ ವೀಡಿಯೊಗಳು ಮತ್ತು ಭಾಷಣಗಳ ಮೂಲಕ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಈ ನಾಲ್ವರ ವಿಚಾರಣೆ ವೇಳೆ ಬೆಂಗಳೂರಿನಿಂದ ಕಾರ್ಯಾಚರಿಸುತ್ತಿರುವ ಸಮಾ ಪರ್ವೀನ್ ಬಗ್ಗೆ ಮಾಹಿತಿ ದೊರೆತಿದೆ.
ನಾಲ್ವರು ಭಯೋತ್ಪಾದಕರೊಂದಿಗೆ ಸಮಾ ಪರ್ವೀನ್ ಸಂಪರ್ಕದಲ್ಲಿದ್ದಳು. ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಗುಂಪಿನಲ್ಲಿ ಸಕ್ರಿಯಳಾಗಿದ್ದಳು ಮತ್ತು ದೇಶ ವಿರೋಧಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಯುವಕರನ್ನು ಜಿಹಾದಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದಳು.
ಸಮಾ ಪರ್ವೀನ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮಿಲಾಗಿರುವುದು ರಹಸ್ಯ ತನಿಖೆಯಲ್ಲಿ ತಿಳಿದುಬಂದಿದೆ. ಆನ್‌ಲೈನ್ ವೇದಿಕೆಗಳಲ್ಲಿ ಜಿಹಾದಿ ಪಿತೂರಿ ನಡೆಸಿದ್ದಾಗಿ ವಿಚಾರಣೆ ವೇಳೆ ಆಕೆ ಒಪ್ಪಿಕೊಂಡಿದ್ದಾಳೆ ಎಂದು ಗುಜರಾತ್ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಮಾ ಪರ್ವೀನ್ ಆನ್‌ಲೈನ್ ಮೂಲಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ತನಿಖೆಯ ಸಮಯದಲ್ಲಿ ಆಕೆಯಿಂದ ವಿವರವಾದ ಪುರಾವೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ.