

ಅಹ್ಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿತ್ತಿರುವ ಆರನೇ ಅಧ್ಯಕ್ಷ. ಹಾಗೇ ಭಾರತಕ್ಕೆ ಅವರ ಪ್ರಥಮ ಭೇಟಿ.
ಇಂದು ಅಹಮದಾಬಾದ್ನ ಮೊಟೆರೋ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಟ್ರಂಪ್ ಬಳಿಕ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ನರೇಂದ್ರ ಮೋದಿ ಜೊತೆಯಾಗಲಿದ್ದಾರೆ. ಹಾಗೇ ಟ್ರಂಪ್ ಪತ್ನಿ, ಮಗಳು, ಅಳಿಯ ಕೂಡ ಇರಲಿದ್ದಾರೆ ಎನ್ನಲಾಗಿದೆ.
ಟ್ರಂಪ್-ಮೋದಿ ರೋಡ್ ಶೋ ವೇಳೆ ನೃತ್ಯಪ್ರದರ್ಶನ ನಡೆಯಲಿದ್ದು ಜಮ್ಮು-ಕಾಶ್ಮೀರದಿಂದ ಈಗಾಗಲೇ ಕಲಾವಿದರು ಆಗಮಿಸಿದ್ದಾರೆ. ಜಮ್ಮುಕಾಶ್ಮೀರದ ನೃತ್ಯ ಕಲಾವಿದರು ಈಗಾಗಲೇ ಅಹಮದಾಬಾದ್ನ ಸಬರಮತಿ ಆಶ್ರಮದ ಎದುರು ನೃತ್ಯ ಮಾಡುತ್ತಿದ್ದಾರೆ.
ಟ್ರಂಪ್ ಅವರಿಗೆ ನಮ್ಮ ದೇಶದ ಸಾಂಸ್ಕೃತಿಕ ಸೌಂದರ್ಯವನ್ನೂ ತೋರಿಸಲು ಸಿದ್ಧತೆ ನಡೆದಿದೆ. ಆಯಾ ರಾಜ್ಯಗಳ, ವಿವಿಧ ಪ್ರಾಂತ್ಯಗಳ ವಿಶೇಷತೆ ಪ್ರದರ್ಶನಕ್ಕಾಗಿ ಪ್ರತ್ಯೇಕವಾಗಿ 50 ವೇದಿಕೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕಲಾವಿದರು ತಮ್ಮ ಕಲೆ, ಸಂಸ್ಕೃತಿಗಳ ಚಿತ್ರಣ ನೀಡಲಿದ್ದಾರೆ.
ಹಾಗೇ ಡೊನಾಲ್ಡ್ ಟ್ರಂಪ್ ಬಂದು ಇಳಿಯಲಿರುವ ಅಹಮದಾಬಾದ್ ಏರ್ಪೋರ್ಟ್ ಬಳಿ ಶಾಲಾ ಮಕ್ಕಳ ನೃತ್ಯತಂಡವೊಂದು ಡಾನ್ಸ್ ಮಾಡುತ್ತಿದೆ. ಇವರೂ ಕೂಡ ರೋಡ್ ಶೋ ವೇಳೆ ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)