ಜಪ್ತಿ ವಸ್ತುಗಳ ಬಿಡುಗಡೆ ಮಾರ್ಗಸೂಚಿ: ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳಿಗೆ ಹೈಕೋರ್ಟ್ ಸೂಚನೆ

highcourt
Published on

ಬೆಂಗಳೂರು: ಕಳ್ಳತನ ಮತ್ತಿತರ ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ಲ್ಯಾಪ್‌ಟಾಪ್, ದುಬಾರಿ ಮೊಬೈಲ್, ಡಿಜಿಟಲ್ ಉಪಕರಣ ಮತ್ತಿತರ ವಸ್ತುಗಳನ್ನು ಸಂಬಂಧಪಟ್ಟ ಮಾಲೀಕರಿಗೆ ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೈಕೋರ್ಟ್ ಹೊರಡಿಸಿದೆ. ಆದರೆ, ಈ ಮಾರ್ಗಸೂಚಿಗಳು ಕೇವಲ ಸೂಚನಾತ್ಮಕವಾಗಿದ್ದು, ಸಮಗ್ರವಲ್ಲ ಎಂದು ಹೇಳಿದೆ.

ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 451, 457 ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 497ರಡಿ ಜಪ್ತಿ ಮಾಡಿಕೊಳ್ಳಲಾದ ವಸ್ತುಗಳನ್ನು ಬಿಡುಗಡೆಗೊಳಿಸುವ ಸಂಬಂಧ ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸುವ ತನಕ ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳು ಈ ಮಾದರಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಈ ಬಗ್ಗೆ ಸರ್ಕಾರ ನಿಯಮಗಳನ್ನು ರೂಪಿಸುವ ಅಗತ್ಯವಿದ್ದು, ಅಲ್ಲಿ ತನಕ ಈ ಮಾರ್ಗಸೂಚಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳು ಅನುರಿಸಬೇಕು. ಜತೆಗೆ ಸರ್ಕಾರ ನಿಯಮಗಳನ್ನು ರೂಪಿಸುವವರೆಗೂ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳ ಅಧಿಕಾರ ಚಲಾಯಿಸುವಿಕೆಗೆ ಈ ಮಾರ್ಗಸೂಚಿಗಳು ಮಾರ್ಗದರ್ಶಕವಾಗಿರಲಿವೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳ ಕಾನೂನು ವ್ಯಾಪ್ತಿ ಮತ್ತು ಅಧಿಕಾರಕ್ಕೆ ಪೂರಕವಾಗಿ ಸರ್ಕಾರ ನಿಯಮಗಳನ್ನು ರೂಪಿಸಬೇಕಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅಂಗಡಿಯೊಂದರಲ್ಲಿ ನಡೆದ ಕಳ್ಳತನದಲ್ಲಿ ಕದ್ದ ಸೂಕ್ಷ್ಮ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಜಪ್ತಿ ಮಾಡಿದ ಪೊಲೀಸರಿಂದ ಅವುಗಳನ್ನು ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಶಾಲ್ ಖಟ್ವಾನಿ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮಾರ್ಗಸೂಚಿಗಳೇನು?

- ಜಪ್ತಿ ಮಾಡಲಾದ ವಸ್ತುಗಳ ಬಿಡುಗಡೆಗೆ ನ್ಯಾಯಾಲಯ ಸೂಚನೆ ನೀಡಿದ ಸಂದರ್ಭದಲ್ಲಿ ಬಿಡುಗಡೆಗೆ ಮುನ್ನ ಪ್ರತಿಯೊಂದು ವಸ್ತು ಖಾತರಿಪಡಿಸಿಕೊಳ್ಳಬೇಕು.

- ಮಹಜರು ಮಾಡಿ ವಶಪಡಿಸಿಕೊಂಡಿರುವ ಎಲ್ಲ ವಸ್ತುಗಳು ಬಿಡುಗಡೆ ವೇಳೆ ಹೊಂದಾಣಿಕೆಯಾಗಬೇಕು.

- ಮಹಜರು ಸಂದರ್ಭದಲ್ಲಿ ದಾಖಲೆಗಳಲ್ಲಿ ಕ್ರಮ ಸಂಖ್ಯೆಗಳನ್ನು ನೀಡಬೇಕು. ಆ ವಸ್ತುಗಳ ತಯಾರಿಕೆ ಮಾಡಿದವರ ಹೆಸರು ಅವುಗಳ ವಿಶಿಷ್ಟ ಗುರುತುಗಳು, ವಿಶಿಷ್ಟ ಸಂಖ್ಯೆಗಳನ್ನು ಸೇರಿಸಿರಬೇಕು.

- ಮಹಜರಿನಲ್ಲಿ ವಶಪಡಿಸಿಕೊಂಡ ಆಸ್ತಿಯ ಅಂದಾಜು ಮೌಲ್ಯ ಉಲ್ಲೇಖಿಸಬೇಕು. ಈ ಅಂಶ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಿಳಿಸಬೇಕು. ಈ ಎಲ್ಲ ವಸ್ತುಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ವೈಯಕ್ತಿಕವಾಗಿ ಪರಿಶೀಲಿಸಬೇಕು. ಅದರ ಅಂದಾಜು ಮೊತ್ತ ಹೊಲಿಕೆಯಾಗುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು.

- ಜಪ್ತಿ ಮತ್ತು ಬಿಡುಗಡೆ ಮಾಡುವ ಸಂದರ್ಭದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಂಡು ಮಾಲೀಕರ ಸಹಿಯನ್ನು ಪಡೆದು ಈ ಸಂಬಂಧ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.

- ಜಪ್ತಿ ವಸ್ತು-ಆಸ್ತಿಗಳ ಮೌಲ್ಯಕ್ಕೆ ಸಂಬಂಧಿಸಿದಂತೆ ಬಾಂಡ್/ಬ್ಯಾಂಕ್ ಗ್ಯಾರೆಂಟಿಗಳನ್ನು ಪಡೆದುಕೊಳ್ಳಬೇಕು.

- ತನಿಖಾಧಿಕಾರಿಗಳು ಸೂಕ್ತ ಕಾರಣಗಳನ್ನು ನೀಡದೆ ವಶಪಡಿಸಿಕೊಂಡ ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಳಿಸಿಕೊಳ್ಳಬಾರದು.

- ಜಪ್ತಿ ವಸ್ತುಗಳನ್ನು ಸಂರಕ್ಷಿತವಾಗಿಡುವುದಕ್ಕೆ ಪೊಲೀಸರ ಬಳಿ ಅಗತ್ಯ ಸೌಲಭ್ಯವಿರುವ ಬಗ್ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಖಾತರಿಪಡಿಸಿಕೊಳ್ಳಬೇಕು. ಆರೋಪ ಪಟ್ಟಿ ಸಲ್ಲಿಸಿದ ಸಂದರ್ಭದಲ್ಲಿ ಆ ವಸ್ತುಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ವಿವರಣೆ ಪಡೆದುಕೊಳ್ಳಬೇಕು.

- ಮಾದಕ ವಸ್ತುಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಅನುಸರಿಸಬೇಕು

- ಜಪ್ತಿ ವಾಹನಗಳನ್ನು ವಿಲೇವಾರಿಗೆ ಕರ್ನಾಟಕ ಮೋಟಾರು ವಾಹನ(ತಿದ್ದುಪಡಿ)ನಿಯಮಗಳು ಅನುಸರಿಸಬೇಕು.

- ವಿದ್ಯುನ್ಮಾನ ಮತ್ತು ಡಿಜಿಟಲ್ ವಸ್ತುಗಳನ್ನು ಸಂರಕ್ಷಣೆ ಹಾಗೂ ದತ್ತಾಂಶ ಹಾಳಾಗದಂತೆ ನೋಡಿಕೊಳ್ಳಬೇಕು.

- ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ವಸ್ತುಗಳು ತನಿಖೆಗೆ ಅಗತ್ಯವಿಲ್ಲದಿದ್ದಲ್ಲಿ ಅವುಗಳ ಛಾಯಾಚಿತ್ರಗಳು ಅಥವಾ ವಿಡಿಯೋಗ್ರಾಫ್‌ಗಳನ್ನು ತೆಗೆದುಕೊಂಡು, ವಸ್ತುಗಳು ಅರ್ಜಿದಾರರಿಗೆ ಹಿಂದಿರುಗಿಸಲು ಆದೇಶಿಸಬಹುದು.

- ಸ್ಪೋಟಕಗಳು, ಕಲಬೆರೆಕೆ ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್ ಸಿಲಿಂಡರ್‌ಗಳು ಇನ್ನಿತರೆ ವಸ್ತುಗಳ ಸುರಕ್ಷತೆ ಮತ್ತು ಅವುಗಳಿಂದ ಉಂಟಾಗಬಹುದಾದ ಸಂಭವನೀಯ ಅಪಘಾತಗಳ ಕುರಿತಂತೆ ಸೂಕ್ತ ಆದೇಶಗಳನ್ನು ಹೊರಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net