

ನವದೆಹಲಿ: ಕರೊನಾ ಮಹಾಮಾರಿಯಿಂದಾಗಿ ಸ್ಥಗಿತಗೊಂಡಿದ್ದ ವಿಶ್ವವಿದ್ಯಾಲಯ ಹಾಗೂ ಕಾಲೇಜು ಕಾರ್ಯಚಟುವಟಿಕೆಗಳ ಮರು ಆರಂಭಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮಾರ್ಗಸೂಚಿ ಹೊರಡಿಸಿದೆ. ವಿವಿಗಳು ರಾಜ್ಯ ಸರ್ಕಾರಗಳೊಂದಿಗೆ ರ್ಚಚಿಸಿ, ಕಂಟೇನ್ಮೆಂಟ್ ವಲಯದಿಂದ ಹೊರಗಿರುವ ಪ್ರದೇಶಗಳಲ್ಲಿ ಕಾಲೇಜುಗಳನ್ನು ತೆರೆಯಬಹುದು ಎಂದು ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯದ ಪರಿಶೀಲನೆ ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಮಾರ್ಗಸೂಚಿ ಪ್ರಕಟಿಸಿದೆ.
ವಾರದಲ್ಲಿ 6 ದಿನ ತರಗತಿಗಳು, ದೈಹಿಕ ಅಂತರ ಕಾಪಾಡುವ ಸಲುವಾಗಿ ಕೋಣೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರಬೇಕು, ಅಗತ್ಯವಿದ್ದಲ್ಲಿ ಬೋಧನಾ ಅವಧಿಯನ್ನು ವಿಸ್ತರಿಸಬಹುದು ಎಂದು ಯುಜಿಸಿ ಸಲಹೆ ನೀಡಿದೆ. ಮೊದಲಿಗೆ ಗ್ರಂಥಾಲಯ, ಪ್ರಯೋಗಾಲಯಗಳು, ಸಂಶೋಧನಾ ವಿದ್ವಾಂಸರು, ಆಡಳಿತಾತ್ಮಕ ಸಿಬ್ಬಂದಿ ಕಚೇರಿಗಳು ಆರಂಭಗೊಳ್ಳಲಿ. ನಂತರ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕರೆಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಕಾಲೇಜು ಅಥವಾ ವಿವಿ ಆರಂಭಕ್ಕೆ ಮುನ್ನ ಆಯಾ ರಾಜ್ಯ ಸರ್ಕಾರಗಳು ಅವುಗಳನ್ನು ಕೋವಿಡ್ನಿಂದ ಸುರಕ್ಷಿತ ಪ್ರದೇಶಗಳು ಎಂದು ಘೋಷಿಸಬೇಕು. ಅಲ್ಲದೆ, ಕರೊನಾ ಸಂಬಂಧ ಸರ್ಕಾರ ಹೊರಡಿಸಿರುವ ನಿರ್ದೇಶನ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಓಡಾಟ ನಿಭಾಯಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಸೋಂಕಿತರನ್ನು ಪತ್ತೆ ಮಾಡುವುದು, ತಪಾಸಣೆ ಕಾರ್ಯ ಎಲ್ಲವನ್ನೂ ಚಾಚೂತಪ್ಪದೆ ಮಾಡಬೇಕು. ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಶಿಕ್ಷಣ ಹಾಗೂ ಕ್ಯಾಂಪಸ್ ಸಂದರ್ಶನ ಉದ್ದೇಶಗಳಿಗಾಗಿ ಕಾಲೇಜಿಗೆ ಬರುವಂತೆ ಸಂಸ್ಥೆಯ ಮುಖ್ಯಸ್ಥರು ತೀರ್ಮಾನ ತೆಗೆದುಕೊಳ್ಳಬಹುದು ಎಂದು ವಿವರಿಸಲಾಗಿದೆ.
ಮನೆಯಲ್ಲಿಯೇ ಆನ್ಲೈನ್ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಆನ್ಲೈನ್ ಅಧ್ಯಯನ ಸಾಮಗ್ರಿ ಮತ್ತು ಇ-ಸಂಪನ್ಮೂಲಗಳನ್ನು ಸಂಸ್ಥೆಗಳು ಒದಗಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧ ಮತ್ತು ವೀಸಾ ಸಂಬಂಧಿ ಸಮಸ್ಯೆಗಳಿಂದಾಗಿ ಕಾಲೇಜಿಗೆ ಬರಲು ಅಸಾಧ್ಯವಾದ ವಿದ್ಯಾರ್ಥಿಗಳಿಗೆ ಆನ್ಲೈನ್ ಬೋಧನೆ-ಕಲಿಕೆಯ ವ್ಯವಸ್ಥೆಯನ್ನು ಮಾಡಬೇಕು ಎಂದು ಸಂಸ್ಥೆಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ವಸತಿ ಅಗತ್ಯವಿದ್ದರೆ ಮಾತ್ರ ವಿವಿಗಳು ಹಾಸ್ಟೆಲ್ಗಳನ್ನು ತೆರೆಯಬಹುದು. ಅಲ್ಲಿಯೂ ಸುರಕ್ಷತೆ ಮತ್ತು ಅನಾರೋಗ್ಯ ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಹಾಸ್ಟೆಲ್ಗಳಲ್ಲಿ ಒಂದೇ ಕೊಠಡಿಯನ್ನು ಹಲವು ವಿದ್ಯಾರ್ಥಿಗಳು ಹಂಚಿಕೊಳ್ಳಲು ಅನುಮತಿ ಇಲ್ಲ. ರೋಗಲಕ್ಷಣದ ವಿದ್ಯಾರ್ಥಿ ಯನ್ನು ಹಾಸ್ಟೆಲ್ನಲ್ಲಿ ಉಳಿಸಿಕೊಳ್ಳಲೇಬಾರದು ಎಂದು ಸೂಚಿಸಲಾಗಿದೆ.
ಆರ್ಟ್ ಗ್ಯಾಲರಿ ಶುರು
ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಕಲಾ ಗ್ಯಾಲರಿ, ವಸ್ತು ಸಂಗ್ರಹಾಲಯಗಳನ್ನು ನವೆಂಬರ್ 10 ನಂತರ ತೆರೆಯಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಹೇಳಿದೆ. ವೀಕ್ಷಣೆಗೆ ಬರುವ ಜನರಿಗೆ ಮಾಸ್ಕ್ ಧರಿಸುವುದು ಕಡ್ಡಾಯ. ಗ್ಯಾಲರಿಗಳಲ್ಲಿ ಆಡಿಯೋ ಗೈಡ್ಗಳ ಪ್ರತಿ ಬಳಕೆಯ ನಂತರ ಸೋಂಕು ನಿವಾರಕ ದ್ರವ ಸಿಂಪಡಿಸಬೇಕು ಮತ್ತು ಸ್ಪರ್ಶ ಆಧಾರಿತ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ಸೀಮಿತಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.