

ಬೆಂಗಳೂರು: ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಅಧಿನಿಯಮವನ್ನು ಜಾರಿಗೆ ತಂದು ಸರ್ಕಾರಿ ವಕೀಲರ ಕಾರ್ಯನಿರ್ವಹಣೆಯನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ಕೋಡಿಫೈ ಮಾಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಈ ವಕೀಲರುಗಳ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಅಧಿನಿಯಮ2023 ನ್ನು ವಿಧಾನ ಮಂಡಲದ ಕಳೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಸರ್ಕಾರಿ ವ್ಯಾಜ್ಯ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಒಂದು ದಿಕ್ಸೂಚಿ ಅಥವಾ ನಿರ್ದೇಶನ ರಹಿತ ರೀತಿಯಲ್ಲಿ ನಡೆಯುತ್ತಿತ್ತು. ಕೇವಲ ಸುತ್ತೋಲೆಗಳು ಸರ್ಕಾರಿ ಆದೇಶಗಳು ನಿಯಮಗಳು ಪರಿಣಾಮರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಕರ್ನಾಟಕ ವಿಧಾನ ಮಂಡಲದಲ್ಲಿ ಇದರಿಂದ ಸರ್ಕಾರದ ವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಮತ್ತು ಜನಹಿತ ಮತ್ತು ಸರ್ಕಾರದ ಹಿತಾಸಕ್ತಿಯನ್ನು ಅತ್ಯುನ್ನತವೆಂದು ಭಾವಿಸಿ, ಪುನರವ್ಯಾಖ್ಯಾನ ಮಾಡಿ, ಹೊಣೆಗಾರಿಕೆ ಮತ್ತು ಜವಬ್ದಾರಿಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಐದಾರು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಮತ್ತು ಇತರ ಸರ್ಕಾರಿ ಸಂಸ್ಥೆಗಳು ರಾಜ್ಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಶೇ75 ರಷ್ಟು ಪ್ರಕರಣಗಳನ್ನು ಸೋತಿವೆ ಅಥವಾ ಸರ್ಕಾರದ ವಿರುದ್ದ ಆದೇಶಗಳಾಗಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಶೇ. 95ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಕರ್ನಾಟಕ ಸರ್ಕಾರ ಸೋಲು ಅನುಭವಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಸರ್ಕಾರಿ ಮೇಲ್ಮನವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳಗೊಂಡು ವೆಚ್ಚದಾಯಕ ವ್ಯವಸ್ಥೆ ರೂಪಿಸಿದೆ.
ವಿಚಾರಣೆ ಹಂತದಲ್ಲಿ 21.4 ಲಕ್ಷ ಪ್ರಕರಣ
ರಾಜ್ಯದ ಜಿಲ್ಲೆ, ತಾಲ್ಲೂಕು ಮತ್ತು ಇತರ ನ್ಯಾಯಾಲಯಗಳಲ್ಲಿ ಹೈಕೋರ್ಟ್‌ವರೆಗೆ ಪ್ರಸ್ತುತ 21.4 ಲಕ್ಷ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಕೆಳ ಹಂತದ ನ್ಯಾಯಾಲಯದಲ್ಲಿ 18.9 ಲಕ್ಷ ಪ್ರಕರಣಗಳಿದ್ದರೆ 2.50 ಲಕ್ಷ ಪ್ರಕರಣಗಳು ಹೈಕೋರ್ಟ್‌ಲ್ಲಿವೆ. 1626 ಪ್ರಕರಣಗಳು 20 ರಿಂದ 30 ವರ್ಷದ ಹಳೆಯವಾಗಿದ್ದರೆ, 30 ವರ್ಷಕ್ಕಿಂತ ಹೆಚ್ಚು ಹಳೆಯದಾದ ಪ್ರಕರಣಗಳು 172 ಇವೆ ಎಂದು ಹೇಳಿದರು.
ಲಿಖಿತ ವಾದ-ಪ್ರತಿವಾದ ಸಲ್ಲಿಕೆ ಕಡ್ಡಾಯ
ರಾಜ್ಯದಲ್ಲಿನ ನ್ಯಾಯಾಲಯಗಳು ಮತ್ತು ಶಾಸನಬದ್ಧ ನ್ಯಾಯಾಧಿಕರಣಗಳ ಮುಂದೆ ಸರ್ಕಾರಿ ವ್ಯಾಜ್ಯಗಳು ನಡೆಸುವ ಕುರಿತಂತೆ ನಿಯಮಗಳು, ಆದೇಶಗಳು, ಅಧಿಸೂಚನೆಗಳು, ಸುತ್ತೋಲೆಗಳು ಮುಂತಾದ ದಿಕ್ಸೂಚಿ ರಹಿತ ನಿರ್ದೇಶನಗಳನ್ನು ಈ ಕಾನೂನಿನ ಮೂಲಕ ಬದಲಾಯಿಸಲಾಗಿದೆ. ವ್ಯಾಜ್ಯಗಳಲ್ಲಿ ಸರ್ಕಾರಿ ವಕೀಲರು ಮೌಖಿಕ ವಾದ-ಪ್ರತಿವಾದಗಳ ಜತೆಗೆ ಲಿಖಿತವಾಗಿ ವಾದ-ಪ್ರತಿವಾದಗಳ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇಂಥ ಲಿಖಿತ ವಾದ-ಪ್ರತಿವಾದಗಳ ಸಲ್ಲಿಕೆಯನ್ನು ಮಾಡುವ ಮೊದಲು ಒಂದು ಪ್ರಕ್ರಿಯೆಯನ್ನು ವ್ಯಾಖ್ಯಾನಿಸಲಾಗಿದೆ ಎಂದು ವಿವರಿಸಿದರು.
ಸಕಾಲಕ್ಕೆ ದಾಖಲೆ ಸಲ್ಲಿಕೆಗೆ ಅವಕಾಶ
ಆರ್ಬಿಟ್ರೇಷನ್ ಪ್ರಕರಣಗಳಲ್ಲಿ ಹಲವಾರು ರೀತಿಯ ಲೋಪಗಳು ವ್ಯತ್ಯಯಗಳು ಆಗುತ್ತಿರುವುದರಿಂದ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮತ್ತು ಸರ್ಕಾರಿ ವಕೀಲರು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಕಾಲಕ್ಕೆ ಸಲ್ಲಿಸುವಂತೆ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಆರ್ಬಿಟ್ರೇಷನ್ ಪ್ರಕರಣಗಳಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಇತರ ಸಂಬಅಧಪಟ್ಟವರೊಅದಿಗೆ ಇನ್ನೂ 15 ದಿವಸದಲ್ಲಿ ಚರ್ಚಿಸಿ ಮಾರ್ಗದರ್ಶಿ ಸೂತ್ರಗಳನ್ನು ನಿರ್ಣಯಿಸಲಾಗುವುದೆಂದು ಎಚ್.ಕೆ.ಪಾಟೀಲ ವಿವರಿಸಿದರು.