ಪಟ್ನಾ: ಮೊಕಾಮಾ ಶಾಸಕ ಅನಂತ್ ಸಿಂಗ್ ಮಗಳ ಮದುವೆಗೆ ಗಡಿಗಳ ಹಂಗಿಲ್ಲದೆ ಆಹ್ವಾನ ನೀಡಲಾಗುತ್ತಿದೆ. ಕುಟುಂಬದ ಮೇಲೆ ಪ್ರೀತಿ ಇಟ್ಟಿರುವ ಎಲ್ಲರನ್ನೂ ಕರೆಯಲಾಗುತ್ತಿದ್ದು, ಪಾಕಿಸ್ತಾನದಲ್ಲಿ ನೆಲೆಸಿರುವ ತಮ್ಮ ಸ್ನೇಹಿತರು ಮತ್ತು ಹಿತೈಷಿಗಳಿಗೂ ಮದುವೆಯ ಆಹ್ವಾನ ಪತ್ರಿಕೆ ಕಳುಹಿಸಲಾಗುತ್ತಿದೆ.
ಮಾಧ್ಯಮಗಳ ಜತೆ ಮಾತನಾಡಿದ ಅನಂತ್ ಸಿಂಗ್, ಭಾರತದ ಜೊತೆಗೆ ಪಾಕಿಸ್ತಾನದಲ್ಲಿರುವ ತಮ್ಮ ಪರಿಚಿತರಿಗೂ ಮದುವೆ ಆಹ್ವಾನ ಪತ್ರಿಕೆ ತಲುಪಿಸಲಾಗುತ್ತಿದೆ ಎಂದಿದ್ದಾರೆ. ಸಂಪರ್ಕದಲ್ಲಿರುವ ಪ್ರತಿಯೊಬ್ಬರನ್ನೂ ಕರೆಯಲು ಪ್ರಯತ್ನಿಸುತ್ತಿದ್ದು, ಮದುವೆ ಎಂಬುದು ವೈಯಕ್ತಿಕ ಸಂಭ್ರಮವಾದ್ದರಿಂದ ಇದರಲ್ಲಿ ರಾಜಕೀಯ ಅಥವಾ ಗಡಿಗಳ ಹಂಗಿರಬಾರದು ಎಂಬುದು ಅವರ ಅಭಿಪ್ರಾಯ.
ನಿತೀಶ್ ಕುಮಾರ್, ಲಾಲು ಯಾದವ್‌ಗೂ ಆಹ್ವಾನ
ಈ ಕೌಟುಂಬಿಕ ಕಾರ್ಯಕ್ರಮಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ರಾಜಕೀಯ ನಾಯಕರನ್ನು ಆಹ್ವಾನಿಸಲಾಗುತ್ತಿದೆ. ‘ಚುನಾವಣೆ ಸಮಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಮದುವೆ ಸಂಭ್ರಮದಲ್ಲಿ ರಾಜಕೀಯ ತರಬಾರದು’ ಎಂದು ಶಾಸಕ ಅನಂತ್ ಸಿಂಗ್ ಹೇಳಿದ್ದಾರೆ.
ಶಾಸಕ ಅನಂತ್ ಸಿಂಗ್ ಅವರ ಸ್ವಗ್ರಾಮ ಲಾಡ್ಮಾದಲ್ಲಿ ಕಿರಿಯ ಮಗಳು ಶಿವಂಗಿ ಸಿಂಗ್ ಹಾಗೂ ರಿಷಿಕೇಶ್ ಕುಮಾರ್ ಅವರ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ನವೆಂಬರ್ 25 ರಂದು ನಡೆಯಲಿರುವ ಈ ಮದುವೆಗಾಗಿ 10 ಬಿಘಾ ಜಮೀನಿನಲ್ಲಿ ಬೃಹತ್ ಮಂಟಪ ಹಾಕಲಾಗುತ್ತಿದ್ದು, ಸುಮಾರು 4 ಲಕ್ಷ ಜನರಿಗೆ ಅಡುಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ಹಾಗೂ ಚಲನಚಿತ್ರ ರಂಗದ ತಾರೆಯರು ಭಾಗವಹಿಸಲಿದ್ದಾರೆ.
ಮದುವೆ ಕಾರ್ಯಕ್ರಮದ ಭಾಗವಾಗಿ ವಿಶೇಷ ಕುದುರೆ ರೇಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನವಾಗಿ ಮಹೀಂದ್ರಾ ಥಾರ್ ಕಾರು ಹಾಗೂ ದ್ವಿತೀಯ ಬಹುಮಾನವಾಗಿ ಬೈಕ್ ನೀಡಲಾಗುತ್ತಿದೆ. ಅದ್ದೂರಿ ಸಿದ್ಧತೆಗಳು, ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಹಾಗೂ ಪಾಕಿಸ್ತಾನಕ್ಕೂ ಆಹ್ವಾನ ನೀಡಿರುವ ಈ ಮದುವೆ ಎಲ್ಲರ ಗಮನ ಸೆಳೆಯುತ್ತಿದೆ.