

ರಾಮನಗರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ರಾಮನಗರ ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
20ಕ್ಕೂ ಹೆಚ್ಚು ವರ್ಷಗಳಿದಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರ ಸೇವಾ ಭದ್ರತೆ, ಸರಿಯಾಗಿ ಸಂಬಳ ನೀಡದೆ ವಂಚಿಸುತ್ತಿದೆ. ವಯೋಮೀತಿ ಮೀರುತ್ತಿರುವ ಕಾರಣ ಸರ್ಕಾರದ ಇತರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅರ್ಹತೆ ಕೂಡ ಕಳೆದುಕೊಂಡಿದ್ದೇವೆ. ನೆಟ್ ಸೆಟ್ ಮತ್ತು ಪಿಎಚ್‌ಡಿಯಂತಹ ಉನ್ನತ ವ್ಯಾಸಂಗ ವಾಡಿರುವ ಉಪನ್ಯಾಸಕರನ್ನು ಕೂಡಲೇ ಗುರ್ತಿಸಿ ಕಾಯಂಗೊಳಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.
ಜಿಲ್ಲೆಯಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಿದೆ. ಉದಾಹರಣೆಗೆ ಚನ್ನಪಟ್ಟಣ ಹಾಗೂ ರಾಮನಗರ ಸರ್ಕಾರಿ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯ ಅತಿಥಿ ಉಪನ್ಯಾಸಕರಿದ್ದಾರೆ. ಇವರಿಲ್ಲದೆ ಕಾಲೇಜು ನಡೆಸುವುದು ಕಷ್ಟ. ವಿದ್ಯಾರ್ಥಿಗಳು ಮತ್ತು ಅತಿಥಿ ಉಪನ್ಯಾಸಕರ ಹಿತದೃಷ್ಟಿಯಿಂದ ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಡಾ.ಅಂಕನಹಳ್ಳಿ ಪಾರ್ಥ, ಬಿ.ಪಿ. ಸುರೇಶ್, ಶಿವಮ್ಮ, ಡಾ.ರಂಗಸ್ವಾಮಿ, ಬೈರೇಶ್, ಆದರ್ಶ, ದೀಪಿಕಾ ಮತ್ತಿತರರು ಇದ್ದರು.