

ಶಿವಮೊಗ್ಗ: ಪರಕೀಯರ ಆಕ್ರಮಣದಿಂದ ಎಷ್ಟೋ ದೇಶಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಭಾರತದ ಮೇಲೂ ಸಾವಿರಾರು ಮಂದಿ ದಂಡೆತ್ತಿ ಬಂದಿದ್ದಾರೆ. ಆದರೂ ನಮ್ಮ ಸಂಸ್ಕೃತಿಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ನಮ್ಮ ಮಠ ಮಂದಿರ, ಗುಡಿ ಗುಂಡಾರಗಳಲ್ಲಿ ಅಡಗಿರುವ ಅಪಾರ ಶಕ್ತಿ ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಣ್ಣಿಸಿದರು.
ವಿನೋನಗರದ ಶಿವಾಲಯದಲ್ಲಿ ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿಯಿಂದ ಉಜ್ಜಯಿನಿ ಸಿಂಹಾಸನಧೀಶ್ವರರ ಇಷ್ಟಲಿಂಗ ಮಹಾಪೂಜೆ, ಪಂಚಮ ಕಳಸಾರೋಹಣ ವಾರ್ಷಿಕೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇಶದ ಮೇಲೆ ಪದೇ ಪದೇ ಪರಕೀಯರ ಆಕ್ರಮಣ, ದಬ್ಬಾಳಿಕೆ ನಡೆಯಿತು. ಸಂಪತ್ತು ಲೂಟಿ ಮಾಡಿದರು. ಅವರೆಲ್ಲ ನಮ್ಮ ಸಂಪತ್ತು, ಸಾಮಗ್ರಿಗಳನ್ನು ಲೂಟಿ ಮಾಡಿದರೋ ವಿನಃ ನಮ್ಮ ಆಚಾರ, ಸಂಸ್ಕೃತಿಯನ್ನು ಲೂಟಿ ಮಾಡಲು ಅವರಿಗೆ ಸಾಧ್ಯವಾಗಲೇ ಇಲ್ಲ ಎಂದರು.
ಭಾರತ ಮಠಮಂದಿರಗಳ ತವರೂರು. ಜಾತಿ, ಧರ್ಮದವರು ಎನ್ನುವ ಬದಲು ಭಾರತೀಯ ಎಂಬ ಕಲ್ಪನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಬೇಕು. ಭಾರತ ಮಂದಿರಗಳ ದೇಶ. ಬೇರೆ ಯಾವ ರಾಷ್ಟ್ರಗಳಲ್ಲೂ ಇಷ್ಟೊಂದು ಗುಡಿ ಮಂದಿರಗಳನ್ನು ಕಾಣಲು ಸಾಧ್ಯವಿಲ್ಲ. ಮಂದಿರ, ಗುಡಿ, ಗುರುಗಳು, ಆಚಾರ, ವಿಚಾರ ಸಂಸ್ಕೃತಿ ಭಾರತೀಯರಿಗೆ ಅವಶ್ಯಕವಾಗಿದೆ. ಮಾನಸಿಕ ನೆಮ್ಮದಿ, ತಾಳ್ಮೆ ಮಠ ಮಂದಿರಗಳಲ್ಲಿ ದೊರೆತಿರುವುದು ನಿಜಕ್ಕೂ ಸತ್ಯ. ಎಷ್ಟೆ ಒತ್ತಡದ ನಡುವೆಯೂ ದೇವಸ್ಥಾನಗಳಿಗೆ ಪ್ರವೇಶಿಸಿದರೆ ಸ್ವಲ್ಪವಾದರೂ ನೆಮ್ಮದಿ ಸಿಗಲಿದೆ. ಅದೇ ಮಠ ಮಂದಿರಗಳ ಶಕ್ತಿ ಎಂದು ಹೇಳಿದರು.
ಸನಾತನ ಎಂಬುದು ಕೇವಲ ಯಾವುದೋ ಒಂದು ಧರ್ಮದ ವಿಚಾರವಲ್ಲ. ಅದು ಬದುಕಿನ ಅತ್ಯಮೂಲ್ಯ ಸಂಗತಿ. ಅತಿಥಿಗಳ ಸತ್ಕಾರದಲ್ಲಿ ಸದಾ ಭಾರತ ಮುಂದಿದ್ದು ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಏನೆಲ್ಲ ಸಾಧಿಸಿದ್ದರೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಜನರಿಗೆ ಸಿಗಬೇಕಿದೆ. ಗುಣಾತ್ಮಕ ಶಿಕ್ಷಣದ ಅವಶ್ಯಕತೆ ಇದ್ದು, ಪ್ರತಿಭಾ ಪಲಾಯನವನ್ನು ತಡೆಯಬೇಕಿದೆ. ಅದನ್ನು ಬಿಟ್ಟು ಬೇರೆ ಯಾವುದೇ ಭಾಗ್ಯ ಕೊಟ್ಟರೂ ಬದುಕು ಹಸನಾಗುವುದಿಲ್ಲ. ಇದು ಯಾವುದೇ ಒಂದು ಪಕ್ಷ ಅಥವಾ ಸರ್ಕಾರಕ್ಕೆ ಸೀಮಿತವಾಗಿಲ್ಲ. ಎಲ್ಲ ರಾಜಕೀಯ ಪಕ್ಷದವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಶ್ರೀ ಬಸವೇಶ್ವರ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಐದು ಪೀಠಗಳು ಪ್ರತಿ ಜಿಲ್ಲೆಯಲ್ಲೂ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಬೆಳಗಾಗಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯದರ್ಶಿ ಎಸ್.ಪಿ.ದಿನೇಶ್, ಸರ್ಜಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ಶಿವಾಲಯದ ಪ್ರಧಾನ ಅರ್ಚಕ ರುದ್ರಯ್ಯ ಶಾಸ್ತ್ರಿ ಮಾತನಾಡಿದರು. ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಟಿ.ವಿ.ಈಶ್ವರಯ್ಯ, ಎನ್.ಎಂ.ರುದ್ರಪ್ಪ, ರುದ್ರಮುನಿ ಸಜ್ಜನ್, ಎನ್.ಜೆ.ರಾಜಶೇಖರ್, ಅನಿತಾ ರವಿಶಂಕರ್, ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ಶಾಂತಾ ಆನಂದ, ಬಾಳೇಕಾಯಿ ಮೋಹನ್, ಮಹೇಶಮೂರ್ತಿ ಉಪಸ್ಥಿತರಿದ್ದರು.
250 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ
ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಬೆಳಗ್ಗೆಯಿಂದ ಉಜ್ಜಯಿನಿ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಇಷ್ಟಲಿಂಗ ಧಾರಿಗಳು ಅಭಿಷೇಕದಲ್ಲಿ ಪಾಲ್ಗೊಂಡಿದ್ದರು. ಜೆ.ಎಸ್.ಮಲ್ಲಿಕಾರ್ಜುನ ಅವರಿಂದ ರುದ್ರಾಕ್ಷಿ ವಿತರಿಸಲಾಯಿತು. ಜೈಲ್ ಕಾಂಪೌಂಡ್‌ನಿಂದ ಶಿವಾಲಯದವರಗೆ ಪೂರ್ಣಕುಂಭ ಹೊತ್ತ 250 ಮಹಿಳೆಯರು ರಾಜಬೀದಿ ಉತ್ಸವದ ಮೂಲಕ ಶ್ರೀಗಳನ್ನು ಸ್ವಾಗತಿಸಲಾಯಿತು.