ಗುಡ್ಡೇಕಲ್‌ನಲ್ಲಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ಆಡಿಕೃತ್ತಿಕೆ ಜಾತ್ರಾ ಸಂಭ್ರಮ

guddekal jatre
Published on

ಶಿವಮೊಗ್ಗ: ಕರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಎರಡು ದಿನಗಳ ಆಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವ ಶುಕ್ರವಾರ ನೆರವೇರಿತು. ಬಾಲಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಲ್ಲಿ ಹರಕೆಯ ಕಾವಡಿಗಳನ್ನು ಹೊತ್ತ ಭಕ್ತರು ಭಕ್ತಿ ಪರಾಕಾಷ್ಠೆ ಮೆರೆದರು.

ಬಾಲಸುಬ್ರಮಣ್ಯ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ಆರಂಭಗೊಂಡವು. ಬಂಡೆ ಕಲ್ಲುಗಳ ಮೇಲೆ ನೆಲೆಸಿರುವ ಬಾಲಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಭಕ್ತರು ಪಡೆದು ಪುನೀತರಾದರು. ಪಾಪ ಪರಿಹಾರ ಮತ್ತು ಪುಣ್ಯದ ಫಲಕ್ಕಾಗಿ ಕಾವಡಿಗಳನ್ನು ಹೊತ್ತು ಹರಕೆ ತೀರಿಸುವ ಹರೋಹರ ಜಾತ್ರೆಯಲ್ಲಿ ಭಕ್ತರು ತುಂಗಾನದಿಯಲ್ಲಿ ಮಿಂದು ಮಡಿಯುಟ್ಟು ಪೂಜೆಗೆ ಅಣಿಯಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಳದಿ ವಸ್ತ್ರಗಳನ್ನು ತೊಟ್ಟ ಭಕ್ತರ ಗುಂಪು ಭುಜದ ಮೇಲೆ ಕಾವಡಿಯನ್ನು ಹೊತ್ತು ವಾದ್ಯದ ತಾಳಕ್ಕೆ ತಕ್ಕ ಹೆಜ್ಜೆ ಹಾಕಿದರು.

ಜಾತ್ರೆಯು ಕರ್ನಾಟಕದಲ್ಲಿಯೇ ಹೆಚ್ಚು ಪ್ರಸಿದ್ಧವಾಗಿದೆ. ಅಲ್ಲದೇ ಹರೋಹರ ಎಂದು ಹೇಳಿಕೊಂಡು ಬರುವ ಭಕ್ತರಿಂದಾಗಿಯೇ ಹರೋಹರ ಜಾತ್ರೆ ಎಂದೂ ಕರೆಯಲ್ಪಡುತ್ತದೆ. ಮೊದಲ ದಿನ ದೇವಾಲಯದಲ್ಲಿ ಅಭಿಷೇಕ ಮತ್ತು ಮಂಗಳಾರತಿ ನೆರವೇರಿತು. ಹಲವು ಭಕ್ತರು ಈ ದಿನವೇ ತಮ್ಮ ಹರಕೆ ಸಲ್ಲಿಸಿದರು. ಕಾವಡಿಗಳನ್ನು ಹೊತ್ತು ತಂದು ದೇವರಿಗೆ ಅರ್ಪಿಸುವುದು ಈ ಜಾತ್ರೆಯ ಮತ್ತೊಂದು ವೈಶಿಷ್ಟೃ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net