

ಸೊರಬ: ಗ್ಯಾರಂಟಿ ಯೋಜನೆಗಳು ಮಹಿಳೆಯರು, ವಿದ್ಯಾರ್ಥಿಗಳು, ಬಡವರ ಶ್ರೇಯೋಭಿವೃದ್ಧಿಗೆ ಆಧಾರವಾಗಿವೆ. ಅವುಗಳಿಂದ ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ. ಜಯಶೀಲ ಗೌಡ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿ ಯೋಜನೆಗಳು ಸರ್ವ ಸಮಾಜಗಳ ಪ್ರಗತಿಗಾಗಿ ರೂಪಿತವಾಗಿವೆ. ತಳ ಸಮುದಾಯಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹಾಗೂ ಮಹಿಳೆಯರ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇವು ಜನಸಾಮಾನ್ಯರಿಗೆ ತಲುಪಬೇಕಾದರೆ ಅಧಿಕಾರಿಗಳ ಹೊಣೆ ಮುಖ್ಯವಾಗಿರುತ್ತದೆ ಎಂದರು.
ಆಹಾರ ಇಲಾಖೆ ನಿರೀಕ್ಷಕ ಯೋಗೀಶ್ ಮಾತನಾಡಿ, ತೆರಿಗೆ ಪಾವತಿದಾರರು, ಪಡಿತರ ತೆಗೆದುಕೊಳ್ಳದೇ ಇರುವವರು, ಎಂಎನ್‌ಸಿ ಕಾಯ್ದೆ ವ್ಯಾಪ್ತಿಗೆ ಒಳಪಟ್ಟಿರುವವರನ್ನು ಸರ್ಕಾರ ಗುರುತಿಸಲು ಮುಂದಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಪ್ರಭಾಕರ ಶಿಗ್ಗಾ ಮಾತನಾಡಿ, ತಾಲೂಕಿನಲ್ಲಿ ಇತ್ತೀಚೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಅಂಥವರ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅರ್ಜಿ ಸಲ್ಲಿಕೆಗೆ ಇದೆ ಅವಕಾಶ: ತಾಲೂಕಿನಲ್ಲಿ ಫಲಾನುಭವಿಗಳಿಗೆ ಸಕಾಲಕ್ಕೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗುತ್ತಿದೆ. ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಸೌಲಭ್ಯ ಪಡಿಯಲು ಇಚ್ಛಿಸುವವರು ಅರ್ಜಿ ಹಾಕಲು ಇನ್ನೂ ಅವಕಾಶವಿದೆ ಎಂದು ತಾಪಂ ಇಒ ಕೆ.ಜಿ ಶಶಿಧರ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮತ್ತು ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯಡಿ ಕೌಶಲ್ಯದೊಂದಿಗೆ ಉದ್ಯೋಗ ಆಪ್ತ ಸಮಾಲೋಚನ ಶಿಬಿರವನ್ನು ತಾಲೂಕಿನ ಎಲ್ಲ ಗ್ರಾಪಂ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 10 ಗ್ರಾಪಂಗಳಲ್ಲಿ ನಡೆಸಲಾಗಿದೆ. 352 ಜನ ನಿರುದ್ಯೋಗಿ ಯವಕ-ಯುವತಿಯರು ಪಾಲ್ಗೊಂಡಿದ್ದು, ಅದರಲ್ಲಿ 13 ಯುವಕರು ಹಾಗೂ 11 ಯುವತಿಯರು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಸಮಿತಿ ಸದಸ್ಯರಾದ ಆರ್.ಟಿ.ಮಂಜುನಾಥ್, ಪ್ರವೀಣ್‌ಕುಮಾರ್, ಚಾಂದ್ ಸಾಬ್, ಮುಕ್ತಿಯಾರ್, ಸಂತೋಷ್, ಪಾಂಡು, ಶಿವಪುತ್ರಪ್ಪ, ರಾಮಪ್ಪ, ಅಧಿಕಾರಿಗಳಾದ ಯೋಗೀಶ್, ನೇತ್ರಾವತಿ ಇತರರಿದ್ದರು.