

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಹೇಳಿದ್ದೊಂದು, ಈಗ ಮಾಡುತ್ತಿರುವುದು ಇನ್ನೊಂದು. ಇದರಿಂದಾಗಿ ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ವಿಧಾನಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಕಾಲಕ್ಕೆ ಎಲ್ಲರಿಗೂ ಫ್ರೀ ಎಂದಿದ್ದರು. ಪ್ರತಿ ತಿಂಗಳು ಕೊಡಬೇಕೆಂದಿಲ್ಲ, ಒಂದೆರಡು ತಿಂಗಳು ತಡವಾಗಿ ಕೊಟ್ಟರೆ ಏನಾಗುತ್ತದೆ ಎಂದು ಸಚಿವರು ರಾಗ ತೆಗೆದಿದ್ದಾರೆ.
ಗ್ಯಾರಂಟಿ ಯೋಜನೆಗಳು ಪರಿಷ್ಕರಿಸದಿದ್ದರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ ಎಂದು ಅನೇಕ ಸಚಿವರು ಕಾಂಗ್ರೆಸ್ ಹೈಕಮಾಂಡ್ ಬಳಿ ಹೇಳಿಕೊಂಡ ಮಾಹಿತಿ ಲಭ್ಯವಾಗಿದೆ ಎಂದು ತಿವಿದರು.
ಯೋಜನೆಗಳ ಲಾನುಭವಿಗಳಿಗೆ ಪ್ರತಿ ಮಾಸಿಕ ಬಿಡುಗಡೆಗೆ ಸರ್ಕಾರದ ಬಳಿ ಹಣವಿಲ್ಲ. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರಿಗೆ ಗೌರವಧನ, ಸದಸ್ಯರಿಗೆ ಮಾಸಿಕ ಸಭಾ ಭತ್ಯೆಯನ್ನು ತಪ್ಪದೆ ಪಾವತಿಸಲು ಅನುದಾನವಿದೆ ಎಂದು ಛೇಡಿಸಿದರು.
ಗ್ಯಾರಂಟಿ ಯೋಜನೆಗಳು ಅನುಷ್ಠಾನ ಅಸಮರ್ಪವಾಗಿರುವಾಗ ಈ ಸಮಿತಿಗಳ ಔಚಿತ್ಯವೇನು ? ಎಂದು ಗೊತ್ತಾಗುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಪೋಷಿಸಲು ಅನುಷ್ಠಾನ ಸಮಿತಿಗಳ ಆಸರೆಯಾಗಿವೆ ಎಂದು ಆರ್.ಅಶೋಕ್ ಕುಟುಕಿದರು.
ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದರೂ ಖರೀದಿ ವಿಳಂಬದಿಂದ ಜೋಳಕ್ಕೆ ನುಸಿ ಹಾಗೂ ಹುಳ ತಗುಲಿದೆ. ಇಂತಹ ಜೋಳ ಖರೀದಿಸುವುದಿಲ್ಲ ಎಂಬ ಅಧಿಕಾರಿಗಳ ಧೋರಣೆಗೆ ರಾಯಚೂರು ಜಿಲ್ಲೆಯ ರೈತರು ಸಿಡಿದೆದ್ದಿದ್ದಾರೆ.
ರಾಜ್ಯ ಸರ್ಕಾರ ನಿಗದಿಪಡಿಸಿದ ವೇಳಾಪಟ್ಟಿ ಪ್ರಕಾರ ಕಳೆದ ಡಿಸೆಂಬರ್ 31ರೊಳಗೆ ನೋಂದಣಿ ಮುಗಿದು, ಜ.31ರೊಳಗೆ ಬೆಂಬಲ ಬೆಲೆಯಡಿ ಜೋಳ ಖರೀದಿ ಪೂರ್ಣಗೊಳಿಸಬೇಕಾಗಿತ್ತು.
ಆದರೆ ನಾಲ್ಕು ತಿಂಗಳ ನಂತರ ಖರೀದಿ ಆರಂಭಿಸಿದ್ದರಿಂದ ಜೋಳ ನುಸಿ, ಹುಳ ಪೀಡಿತವಾಗಿದ್ದು, ಏಕಾಏಕಿ ಜೋಳ ಖರೀದಿಯನ್ನೇ ನಿಲ್ಲಿಸಲಾಗಿದೆ.
ಖರೀದಿ ವಿಳಂಬದ ತಪ್ಪಿಗೆ ಅನ್ನದಾತರು ನಷ್ಟ-ಕಷ್ಟ ಏಕೆ ಅನುಭವಿಸಬೇಕು ?. ಸಿಂಧನೂರಿನಲ್ಲಿ ರೈತರು ಬೀದಿಗೆ ಇಳಿದಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಜೋಳ ಖರೀದಿಸಲು ಸೂಚನೆ ನೀಡಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.